ಬೆಂಗಳೂರು/ನವ ದೆಹಲಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ 2011ರ ಭೂ ಡಿನೋಟಿಫಿಕೇಶನ್ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ. ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಸ್ತ್ರತಪೀಠಕ್ಕೆ ವರ್ಗಾಯಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಸೋಮವಾರ ಪ್ರಕರಣವು ಕಾನೂನುಬದ್ಧವಾಗಿದೇಯೇ ಎಂಬ ಬಗ್ಗೆ ತನ್ನ ತೀರ್ಪನ್ನು ಪ್ರಕಟಿಸಬೇಕಿತ್ತು. ಪ್ರಕರಣವು ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗಿನ ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡಿದೆ.
ಯಡಿಯೂರಪ್ಪ ವಿರುದ್ಧ ಬಾಕಿ ಇರುವ ಮತ್ತೊಂದು ಪ್ರಕರಣವು ಈಗಾಗಲೇ ವಿಸ್ತ್ರತ ಪೀಠಕ್ಕೆ ಉಲ್ಲೇಖಿಸಲಾಗಿರುವ ಇದೇ ರೀತಿಯ ಕಾನೂನು ಪ್ರಶ್ನೆಗಳನ್ನು ಎತ್ತಿದ್ದರಿಂದ, ವಿಭಾಗೀಯ ಪೀಠವು ಯಡಿಯೂರಪ್ಪ ಅವರ ಅರ್ಜಿಯನ್ನು ಆ ಪ್ರಕರಣದೊಂದಿಗೆ ಸೇರಿಸಿದೆ.
ಪ್ರಕರಣದ ಕುರಿತ ಸೂಕ್ತ ಆದೇಶಗಳಿಗಾಗಿ, ಬಿ.ಎಸ್.ಯಡಿಯೂರಪ್ಪ ಅವರ ಪ್ರಕರಣವನ್ನು ಸಿಜೆಐ ಅವರ ಮುಂದೆ ಇಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು.
ಕೈಗಾರಿಕಾ ಅಭಿವೃದ್ಧಿಗಾಗಿ ಮೀಸಲಿಟ್ಟ ಸರ್ಕಾರಿ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ. ಇದರಿಂದಾಗಿ ರಾಜ್ಯ ಖಜಾನೆಗೆ ಗಣನೀಯ ನಷ್ಟವಾಗಿದೆ ಎಂಬ ಆರೋಪಗಳನ್ನು ಯಡಿಯೂರಪ್ಪ ಅವರ ಮೇಲೆ ಹೊರಿಸಲಾಗಿದೆ.
2006ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಪ್ರಭಾವ ಬಳಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಹೂವಿನನಾಯಕನಹಳ್ಳಿಯಲ್ಲಿ ಹಾರ್ಡ್‌ವೇರ್ ಪಾರ್ಕ್ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ ಬೆಂಗಳೂರು ಉತ್ತರ ತಾಲ್ಲೂಕಿನ ಕೆಲವು ಭೂಮಿಯನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಸೇವಾ ಶುಲ್ಕಗಳು ಮತ್ತು ಅಭಿವೃದ್ಧಿ ಶುಲ್ಕಗಳನ್ನು ಮನ್ನಾ ಮಾಡಲಾಗಿದ್ದರಿಂದ ರಾಜ್ಯ ಬೊಕ್ಕಸಕ್ಕೆ ಗಣನೀಯ ನಷ್ಟ ಉಂಟಾಗಿದೆ ಎಂದು ದೂರುದಾರ ಆಲಂ ಪಾಷಾ ಆರೋಪಿಸಿದ್ದಾರೆ.
2012ರಲ್ಲಿ, ಪೊಲೀಸರು ಪ್ರಕರಣದಲ್ಲಿ 9 ಮಂದಿ ಇತರ ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟು, ಆಗಿನ ಸಿಎಂ ಯಡಿಯೂರಪ್ಪ ಮತ್ತು ಆಗಿನ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಆರೋಪಿಗಳೆಂದು ಹೆಸರಿಸಿದ್ದರು. ಆದರೆ ವಿಚಾರಣಾ ನ್ಯಾಯಾಲಯವು ಯಡಿಯೂರಪ್ಪ ಮತ್ತು ನಾಯ್ಡು ಅವರನ್ನು ದೋಷಾರೋಪಣೆ ಮಾಡಲು ಯಾವುದೇ ಪುರಾವೆಗಳಿಲ್ಲ ಎಂದು ಅವರ ವಿರುದ್ಧದ ದೂರನ್ನು ವಜಾಗೊಳಿಸಿತ್ತು.
ನಂತರ ಪಾಷಾ ಕರ್ನಾಟಕ ಹೈಕೋರ್ಟ್ ಗೆ ಈ ಕುರಿತು ಅರ್ಜಿ ಸಲ್ಲಿಸಿದರು. 2021 ರಲ್ಲಿ, ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಯಡಿಯೂರಪ್ಪ ಮತ್ತು ನಾಯ್ಡು ವಿರುದ್ಧದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ವಿಚಾರಣೆಯನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿತು. ಇದನ್ನು ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಕರ್ನಾಟಕ ರಾಜ್ಯದ ಪರವಾಗಿ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಮತ್ತು ಆರ್ ಬಸಂತ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪನ್ವರ್ ವಾದ ಮಂಡಿಸಿದರು.