ಬೆಂಗಳೂರು:
ಹಿಮಾಚಲ ಪ್ರದೇಶ ಮೂಲದ 23 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಆರ್ಯಕುಮಾರ್ ನಡ್ಡಾ (23) ಎಂದು ಗುರುತಿಸಲಾಗಿದ್ದೆ. ಶ್ರೀಗಂಧಕಾವಲು ಬಳಿಯ ‘ಡಿ’ ಗ್ರೂಪ್ ಲೇಔಟ್‌ನಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಿದ್ಯಾರ್ಥಿ ವಾಸವಿದ್ದ. ನಾಗರಬಾವಿಯ ಖಾಸಗಿ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದ.
ಭಾನುವಾರ ಸ್ನೇಹಿತರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕುಮಾರ್ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಮೈಗ್ರೇನ್‌ನಿಂದ ಬಳಲುತ್ತಿದ್ದರಿಂದ, ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಯಾವುದೇ ಡೆತ್ ನೋಟ್ ಅನ್ನು ಬರೆದಿಲ್ಲ. ಘಟನೆಯ ಬಗ್ಗೆ ಮೃತ ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.