ಬೆಂಗಳೂರು:
ಶಾಸಕ ಲಕ್ಷ್ಮಣ ಸವದಿ ಹಿರಿಯರಿದ್ದಾರೆ. ದೈಹಿಕವಾಗಿ ಅವರು ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರ ಹಿಂದೆಯೂ ಹೋಗಿಲ್ಲ. ತಾವಾಗಿಯೇ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ತಮ್ಮಲ್ಲಿರುವ ಶಾಸಕರನ್ನು ಮೊದಲು ಉಳಿಸಿಕೊಳ್ಳಲಿ ಎಂದರು.
ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಅಧಿಕಾರಕ್ಕೆ ಬರಬೇಕು ಎನ್ನುವ ಅಭಿಲಾಷೆ ಇದೆ. ಹೀಗಾಗಿ ಯಾವ ಯಾವ ನಾಯಕರು ಬರುತ್ತಾರೆ ಕಾದು ನೋಡಿ ಎನ್ನುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಮುನ್ಸೂಚನೆ ನೀಡಿದರು.
ಬಿಜೆಪಿ ಕೇವಲ ವೀರಶೈವ ಪಕ್ಷ ಅಲ್ಲ. ಎಲ್ಲಾ ಸಮುದಾಯ ಒಗ್ಗೂಡಿಸಿಕೊಂಡು ಹೋಗುವ ಪಕ್ಷ ಬಿಜೆಪಿ. ಕಾಂಗ್ರೆಸ್ ನವರು ಬೇರೆ ಬೇರೆ ಸಮುದಾಯವನ್ಜು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ್ ಅವರು ಯಾವುದೇ ಬೇಡಿಕೆ ಇಡದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕುಮಾರ ಬಂಗಾರಪ್ಪ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಸ್ವಲ್ಪ ನಿರಾಸೆಯಾಗಿದ್ದಾರೆ.ಎಲ್ಲವನ್ನು ಸರಿಪಡಿಸುತ್ತೇವೆ ಎಂದರು.
ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ನಂಬಿಕೊಂಡು ಕುಳಿತಿದೆ. ಸಿದ್ದರಾಮಯ್ಯ ಸರಕಾರ ಜನರ ಕಿವಿಗೆ ಹೂವು ಇಡುವ ಕೆಲಸ ಮಾಡುತ್ತಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸರಕಾರವೇ ಹಣ ಕೊಡ್ತಿತ್ತು. ಆದರೆ, ಈಗ ಸರಕಾರ ರೈತರಿಂದ ಹಣ ವಸೂಲಿ ಮಾಡುತ್ತಿದೆ. ಎಲ್ಲದಕ್ಕೂ ಕೇಂದ್ರ ಸರಕಾರದ ಕಡೆ ಕೈ ತೋರಿಸುತ್ತಿದೆ. ಸರಕಾರಿ ನೌಕರರಿಗೆ ಸಂಬಳ ಕೊಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.