ಬೆಂಗಳೂರು, ಜ.29: ರಾಜ್ಯ ಪೊಲೀಸ್ ಸಿಬ್ಬಂದಿಯ ಮಾನಸಿಕ ಆರೋಗ್ಯ, ಕುಟುಂಬ ಜೀವನ ಮತ್ತು ಕೆಲಸ–ವೈಯಕ್ತಿಕ ಸಮತೋಲನಕ್ಕೆ ಮಹತ್ವ ನೀಡುವ ಮಾನವೀಯ ನಿರ್ಧಾರವನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು (ಡಿಜಿಪಿ & ಐಜಿಪಿ) ಪ್ರಕಟಿಸಿದ್ದಾರೆ.
ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಗಳಂತಹ ವೈಯಕ್ತಿಕ ಹಾಗೂ ಭಾವನಾತ್ಮಕ ಮಹತ್ವದ ದಿನಗಳಲ್ಲಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಜೆ ಕೋರಿದಲ್ಲಿ ತಪ್ಪದೇ ಸಾಂದರ್ಭಿಕ ರಜೆ ಮಂಜೂರು ಮಾಡಬೇಕು ಎಂದು ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಮಾನಸಿಕ ಪುನಶ್ಚೇತನಕ್ಕೆ ಅವಕಾಶ
ಸುತ್ತೋಲೆಯಲ್ಲಿ, ಕಠಿಣ ಪರಿಸ್ಥಿತಿಗಳಲ್ಲಿ ದಿನನಿತ್ಯ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಜಾರಿಯ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಗೆ, ಇಂತಹ ವಿಶೇಷ ದಿನಗಳಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನೋಬಲ ಹೆಚ್ಚುತ್ತದೆ ಎಂದು ಉಲ್ಲೇಖಿಸಲಾಗಿದೆ.
ಕಾರ್ಯಕ್ಷಮತೆ–ಶಿಸ್ತು ಬಲಪಡಿಸುವ ಕ್ರಮ
ವೈಯಕ್ತಿಕ ಜೀವನಕ್ಕೆ ಗೌರವ ನೀಡುವ ಈ ನಿರ್ಧಾರವು ಪೊಲೀಸ್ ಸಿಬ್ಬಂದಿಯ ನಿಷ್ಠೆ, ಶಿಸ್ತು ಹಾಗೂ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರೊಂದಿಗೆ, ಕೆಲಸದ ತೃಪ್ತಿ ಹಾಗೂ ಉತ್ಪಾದಕತೆ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಲಾಗಿದೆ.
ಘಟಕಾಧಿಕಾರಿಗಳಿಗೆ ಸ್ಪಷ್ಟ ಸೂಚನೆ
ಈ ಸುತ್ತೋಲೆಯಂತೆ, ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ದಿನ ರಜೆ ಕೋರಿ ಅರ್ಜಿ ಸಲ್ಲಿಸಿದಲ್ಲಿ, ಅನಗತ್ಯ ವಿಳಂಬ ಅಥವಾ ನಿರಾಕರಣೆ ಮಾಡದೇ ರಜೆ ಮಂಜೂರು ಮಾಡಬೇಕು ಎಂದು ಡಿಜಿಪಿ ಸೂಚಿಸಿದ್ದಾರೆ.
ಈ ಆದೇಶವು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ಅನ್ವಯವಾಗಲಿದ್ದು, ಮಾನವೀಯ ಪೊಲೀಸ್ ಆಡಳಿತದತ್ತ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
