Home ಕರ್ನಾಟಕ Water and Air Act Karnataka | ಜಲ‌ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸುವ ಕೈಗಾರಿಕೆಗಳ...

Water and Air Act Karnataka | ಜಲ‌ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ: ಸಚಿವ ಎಂ.ಬಿ.ಪಾಟೀಲ್

8
0

ಬೆಂಗಳೂರು, ಮಾರ್ಚ್ 19 ( ಕರ್ನಾಟಕ ವಾರ್ತೆ) ಜಲ‌ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬೃಹತ್ ಮತ್ತು ಮಧ್ಯಮ‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ ಬಸನಗೌಡ ಬಾದರ್ಲಿ, ವಸಂತ್ ಕುಮಾರ್ ಹಾಗೂ ಇತರರು ನಿಯಮ 330 ರಡಿ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರವು ಬಲ್ಡೋಟಾ ಕಂಪೆನಿಗೆ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಿಸಲು ಅನುಮತಿ ನೀಡಿರುವುದರಿಂದ ಆ ಭಾಗದ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ ಎಂಬ ಬಗ್ಗೆ ನೀಡಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಮತ್ತು ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ, 1981 ಅಡಿಯಲ್ಲಿ ಬಲ್ಡೋಟಾ ಕಂಪನಿಗೆ ವಾರ್ಷಿಕ 3.5 ಮಿಲಿಯನ್ ಟನ್ ಸಾಮರ್ಥ್ಯದ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಹಾಗೂ 295 ಮೆಗಾ ವ್ಯಾಟ್ ಸಾಮರ್ಥ್ಯದ ಸ್ವಾಯತ್ತ ವಿದ್ಯುತ್ ಸ್ಯಾವರ ಸ್ಥಾಪನೆ ಮಾಡಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ನವದೆಹಲಿ ಇವರ ದಿನಾಂಕ 27.07.2021ರ ಪರಿಸರ ಅನುಮೋದನೆಗೆ ಅನುಸಾರವಾಗಿ ಸ್ಥಾಪನಾ ಸಮ್ಮತಿ ಪತ್ರವನ್ನು ದಿನಾಂಕ 19.07 2024 ರಂದು ನೀಡಿರುತ್ತದೆ . ಇದರ ಯೋಜನಾ ವೆಚ್ಚವು ರೂ 17,979 ಕೋಟಿ ಆಗಿರುತ್ತದೆ.

ಅಲ್ಲದೇ ಇತ್ತೀಚೆಗೆ ಜರುಗಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ-2025ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೂ. 54,000 ಕೋಟಿ ಬಂಡವಾಳ ಹೂಡುವ ವಿಸ್ತರಣಾ ಯೋಜನೆಗೆ BSPL (ಬಲ್ಡೋಟಾ) ಕಂಪನಿಯೊಂದಿಗೆ ರಾಜ್ಯ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಬಲ್ಡೋಟಾ ಗ್ರೂಪ್‌ನ ಸಂಸ್ಥೆಯಾದ ಎಂಎಸ್‌ಪಿಎಲ್ ಕೈಗಾರಿಕೆ ಒಳಗೊಂಡಂತೆ ಇತರೆ ಕೈಗಾರಿಕೆಗಳಿಂದ ಮಾಲಿನ್ಯವಾಗುತ್ತಿರುವ ಬಗ್ಗೆ, ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ತಂಡವನ್ನು ರಚಿಸಿದ್ದು, ದಿನಾಂಕ 11.12.2024 ಮತ್ತು 13. 12.2024. ರಂದು ಕೊಪ್ಪಳ ತಾಲ್ಲೂಕಿನಲ್ಲಿರುವ ವಿವಿಧ ಕೈಗಾರಿಕೆಗಳನ್ನು ಪರಿವೀಕ್ಷಣೆ ಮಾಡಿದ್ದು, ಈ ತಂಡದ ವರದಿಯನ್ನು ಆಧರಿಸಿ ಸಂಬಂಧಪಟ್ಟ ಕೈಗಾರಿಕೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಅಲ್ಲದೆ ಈ ತಂಡದ ಸಂಕ್ಷಿಪ್ತ ವರದಿ, ಕೆಎಸ್ ಪಿಸಿಬಿ ಅಧಿಕಾರಿಗಳು, ವಿಜಯನಗರ ಇವರು ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿರುವ ಶಿಫಾರಸ್ಸನ್ನು. ಮುಂಬರುವ ರಾಜ್ಯ ಮಟ್ಟದ ಜಾರಿ ಸಮಿತಿ (SLEC) ಸಭೆಯಲ್ಲಿ ಮಂಡಿಸಲಾಗುತ್ತಿದ್ದು , ಸಮಿತಿ ಸಭೆಯ ತೀರ್ಮಾನದಂತೆ, ಜಲ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘಿಸಿರುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಎಸ್‌ಪಿಸಿಬಿಯು ತಿಳಿಸಿರುತ್ತದೆ.

ಪ್ರಸ್ತುತ, ಬಲ್ಡೋಟಾ ಕಂಪನಿ ವಿಸ್ತರಣೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು

LEAVE A REPLY

Please enter your comment!
Please enter your name here