ಬೆಂಗಳೂರು, ಆಗಸ್ಟ್ 21 ( ಕರ್ನಾಟಕ ವಾರ್ತೆ) ವೀಲಿಂಗ್ ಮಾಡುವ ಅಪ್ರಾಪ್ತ ಬೈಕ್ ಸವಾರರ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದೆಂದು ಗೃಹ ಸಚಿವ ಡಾ.ಜಿ.ಪರಮೇಶ್ಚರ್ ತಿಳಿಸಿದರು
ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಬೆಂಗಳೂರು ನಗರದಲ್ಲಿ ವೀಲಿಂಗ್ ಹಾವಳಿ ತಡೆಗಟ್ಟಲು ಅಂತಹ ಬೈಕ್ ಸವಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಒಂದು ವೇಳೆ ಬೈಕ್ ಸವಾರರು ಅಪ್ರಾಪ್ತರಾಗಿದ್ದಲ್ಲಿ, ಅವರ ಜೊತೆಗೆ ಅವರ ಪೋಷಕರ ಮೇಲೂ ಪ್ರಕರಣ ದಾಖಲು ಮಾಡಲಾಗುತ್ತಿದೆ. ವೀಲಿಂಗ್ ಗೆ ಬಳಸಲಾಗುವ ವಾಹನ, ಆರ್ ಸಿ ಬುಕ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸುವಂತೆ ಸಂಬಂಧಪಟ್ಟ ಸಾರಿಗೆ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಇದಲ್ಲದೆ ಹೆಚ್ಚಾಗಿ ವೀಲಿಂಗ್ ಮಾಡುವ ರಸ್ತೆಗಳಲ್ಲಿ ಗಸ್ತು ತಿರುಗುವಿಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.