ಬೆಂಗಳೂರು:
ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ ಮುಂದುವರೆದಿದೆ. ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರಿಗೆ ನೆರವಾಗುವ ದೃಷ್ಟಿಯಿಂದ ‘ಕಾನೂನು ಸಹಾಯವಾಣಿ’ (18003091907) ಉದ್ಘಾಟಿಸಲಾಗಿದೆ ಎಂದು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಹೆಲ್ಪ್‍ಲೈನ್ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ, ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ರಾಜಕೀಯ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ ಎಂದು ತಿಳಿಸಿದರು.
ಕಾನೂನು ಪ್ರಕೋಷ್ಠದವರು ಈ ಹಿನ್ನೆಲೆಯಲ್ಲಿ ಯೋಗೇಂದ್ರ ಮತ್ತು ಅವರ 100 ವಕೀಲರ ತಂಡವು ಸಹಾಯವಾಣಿ ಉದ್ಘಾಟಿಸುತ್ತಿದೆ ಎಂದು ಅವರು ತಿಳಿಸಿದರು. ಸದನದ ಒಳಗೆ ಮತ್ತು ಹೊರಗೆ ಇಂಥ ದೌರ್ನಜ್ಯದ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಹೋರಾಟದ ಮೂಲಕವೇ ಬಿಜೆಪಿ ಬೆಳೆದುಬಂದಿದೆ. ಈ ಪಕ್ಷದ ದಮನ ಇವತ್ತಿನದಲ್ಲ. ಇಂಥ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ- ಧೈರ್ಯ ಕಳಕೊಳ್ಳಬಾರದು. ಪಕ್ಷವು ಅನ್ಯಾಯ, ಅವ್ಯವಸ್ಥೆ ವಿರುದ್ಧ ಹೋರಾಟ ಮಾಡೋಣ ಎಂದು ಕಿವಿಮಾತು ಮತ್ತು ಧೈರ್ಯ ಹೇಳಿದರು. ದೌರ್ಜನ್ಯ ನಡೆದರೆ, ಸುಳ್ಳು ಕೇಸು ಹಾಕಿದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು. ಯೋಗೇಂದ್ರ ಅವರ ತಂಡವನ್ನು ಅಭಿನಂದಿಸಿದರು.
ಬಿಜೆಪಿ ಕಾರ್ಯಕರ್ತರ ಒಳಿತು ಮತ್ತು ಅವರ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಹೈಕೋರ್ಟ್ ಪೀಠವಿರುವ ಎಲ್ಲ ಜಾಗಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡದ ರಚನೆ ಆಗಿದೆ. ರಾಜ್ಯದ ನೂರಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯ ನಿರ್ವಹಣೆ ಮಾಡಲು ಸಹಕರಿಸುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ದ್ವೇಷದ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿ, ಸುಳ್ಳು ಆರೋಪ ಹೊರಿಸಿ ಪೊಲೀಸ್ ಸ್ಟೇಷನ್‍ನಲ್ಲಿ ದಮನ ಮಾಡಲು ಪ್ರಯತ್ನ ನಡೆದಿದೆ. ರೌಡಿ ಶೀಟರ್ ಆಗಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಕಾಂಗ್ರೆಸ್ ಸರಕಾರದ ಈ ಕ್ರಮವನ್ನು ಗಮನಿಸಿ ಕಾರ್ಯಕರ್ತರ ನೆರವಿಗೆ ಬರುವ ದೃಷ್ಟಿಯಿಂದ ಸಹಾಯವಾಣಿ ರಚನೆ ಆಗಿದೆ ಎಂದರು.
ನಮ್ಮ ಕಾರ್ಯಕರ್ತರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಕೆಲಸ ಕಳಕೊಳ್ಳುವಂತೆ ಮಾಡುವ ಪ್ರಯತ್ನ ಹಿಂದೆ ಆಗಿತ್ತು ಎಂದು ಆರೋಪಿಸಿದರು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಆದಾಗ ಎಫ್‍ಐಆರ್ ನೋಂದಣಿ ವೇಳೆ ವಿಳಂಬ ಮಾಡಲಾಗುತ್ತಿತ್ತು. ದೋಷಾರೋಪ ಪಟ್ಟಿ ಸಲ್ಲಿಸುವಾಗ ಅದನ್ನು ಸಮರ್ಪಕವಾಗಿ ಸಲ್ಲಿಸುತ್ತಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ಸಿನ ಈ ಸರಕಾರದಲ್ಲೂ ಪ್ರಮುಖ ಸಚಿವರು ಬ್ಯಾಕ್‍ಗ್ರೌಂಡ್ ಸೆಟ್ಟಿಂಗ್ ಮಾಡುವ ಹೇಳಿಕೆ ಕೊಡುತ್ತಿದ್ದಾರೆ. ನಾಳೆ ರಾಜಕೀಯ ದ್ವೇಷದಿಂದ ಮಾಡುವ ಬಂಧನಗಳಿಗೆ ಈಗಿನಿಂದ ವೇದಿಕೆ ಸಿದ್ಧಪಡಿಸುವ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಗೃಹಸಚಿವರು ಕರಾವಳಿ ಭಾಗದಲ್ಲಿ ಅತ್ಯಂತ ಪೂರ್ವಾಗ್ರಹದಿಂದ ಹೇಳಿಕೆ ಕೊಟ್ಟಿದ್ದಾರೆ. ಆ ಭಾಗದಲ್ಲಿ ಕೆಲಸ ಮಾಡುವ ಸಾಂಸ್ಕøತಿಕ ಸಂಘಟನೆಗಳನ್ನು ಹತ್ತಿಕ್ಕಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸುವುದಾಗಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.
ಹಬ್ಬಗಳ ಮೆರವಣಿಗೆಗೂ ಅವಕಾಶ ಇಲ್ಲ
ಸಂವಿಧಾನದಲ್ಲಿ ರಾಜಕೀಯ ಪಕ್ಷಕ್ಕೆ ಕೊಟ್ಟ ಅವಕಾಶದಂತೆ ನಡೆದುಕೊಂಡರೂ ಸುಳ್ಳು ಕೇಸು ಹಾಕಿದ್ದರು. ಗಣಪತಿ ಹಬ್ಬ, ಯುಗಾದಿ, ರಾಮನವಮಿ, ಹನುಮ ಜಯಂತಿಯ ಸಂದರ್ಭದಲ್ಲೂ ಮೆರವಣಿಗೆಗೆ ಅವಕಾಶ ಕೊಟ್ಟಿರಲಿಲ್ಲ. ಆಗಲೂ ಕೋರ್ಟಿಗೆ ಹೋಗಿ ಅನುಮತಿ ಪಡೆದು ರ್ಯಾಲಿ, ಮೆರವಣಿಗೆ, ಶೋಭಾಯಾತ್ರೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು ಎಂದು ತೇಜಸ್ವಿ ಸೂರ್ಯ ಅವರು ಆರೋಪಿಸಿದರು.
ಕಾಂಗ್ರೆಸ್ ಸರಕಾರವು ಈ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದಾಗ ಫೇಸ್ ಬುಕ್‍ನಲ್ಲಿ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಟೀಕಿಸಿ ಪೋಸ್ಟ್ ಹಾಕಿದ ಕಾರಣಕ್ಕೆ ಕೇಸು ಹಾಕಿಸಿ ಅವರನ್ನು ಬಂಧಿಸಲಾಗುತ್ತಿತ್ತು. ವಾಟ್ಸ್ ಆ್ಯಪ್‍ಗೆ ಕಾರ್ಟೂನ್, ಮೀಮ್ ಅನ್ನು ಹಂಚಿಕೊಂಡಾಗ ಸರಕಾರದ ಕಡೆಯಿಂದ ಪೊಲೀಸರನ್ನು ಕಳಿಸಿ ಬಂಧಿಸುವ ಕೆಲಸ ನಡೆದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಮಂತ್ರಿ ಸಹಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸಹಾಯವಾಣಿ ಉದ್ಘಾಟಿಸಲಾಗುತ್ತಿದೆ. ಸಂಸದ ತೇಜಸ್ವಿ ಸೂರ್ಯರವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಮಾತನಾಡಿ, ವಿಶಿಷ್ಟ ಹೆಲ್ಪ್‍ಲೈನನ್ನು ಬಿಜೆಪಿ ಇವತ್ತು ಆರಂಭಿಸಲಿದೆ. ಇದರ ಮೂಲಕ ಬಿಜೆಪಿ ಕಾರ್ಯಕರ್ತರ ಸುರಕ್ಷತೆಗೆ ಮತ್ತು ಅನೇಕ ಸಂಕಷ್ಟದ ಪರಿಸ್ಥಿತಿಗೆ ನೆರವು ಲಭಿಸಲಿದೆ ಎಂದು ತಿಳಿಸಿದರು.
ಅನೇಕ ದೌರ್ಜನ್ಯಗಳು ಈಚೆಗೆ ನಡೆದಿದ್ದು, ಇದಕ್ಕೆ ನ್ಯಾಯಕೋರಿ ಪೊಲೀಸರ ಬಳಿ ತೆರಳಿದಾಗ ಅವರ ಸ್ಪಂದನೆಯೂ ಕಡಿಮೆ ಆಗಿದೆ ಎಂದು ಆಕ್ಷೇಪಿಸಿದರು. ಪೊಲೀಸ್ ವ್ಯವಸ್ಥೆ ಮತ್ತು ಕಾನೂನು- ಸುವ್ಯವಸ್ಥೆ ಚುರುಕುಗೊಳಿಸಲು ಈ ಹೆಲ್ಪ್ ಲೈನ್ ಪ್ರಯೋಜನಕಾರಿ ಎಂದು ನುಡಿದರು. ಇದು 24ó-7 ಕೆಲಸ ಮಾಡಲಿದೆ ಎಂದು ವಿವರಿಸಿದರು.
ರಾಜ್ಯ ಸಮಿತಿ ಸದಸ್ಯ ವಸಂತಕುಮಾರ್, ಹೆಲ್ಪ್ ಲೈನ್ ಕೋ ಆರ್ಡಿನೇಟರ್ ಮತ್ತು ವಕೀಲ ಸಂದೀಪ್ ರವಿ ಅವರು ಉಪಸ್ಥಿತರಿದ್ದರು.