Home ಬೆಳಗಾವಿ “Legislative Assembly Should Not Become a Factory of Fake News,” Says HK...

“Legislative Assembly Should Not Become a Factory of Fake News,” Says HK Patil | ವಿಧಾನಸಭೆ ಸುಳ್ಳು ಸುದ್ದಿ ಸೃಷ್ಟಿಸುವ ಫ್ಯಾಕ್ಟರಿ ಆಗಬಾರದು: ಎಚ್.ಕೆ.ಪಾಟೀಲ್

83
0

ಬೆಳಗಾವಿ:

ಹುಬ್ಬಳ್ಳಿಯಲ್ಲಿ ಮುಸ್ಲಿಮ್ ಸಮುದಾಯದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಹಂತ ಹಂತವಾಗಿ 10 ಸಾವಿರ ಕೋಟಿ ರೂ.ಗಳನ್ನು ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿಯು ಬುಧವಾರ ವಿಧಾನಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿತು.

ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ‘ಅಧಿವೇಶನ ನಡೆಯುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮ್ ಸಮುದಾಯಕ್ಕೆ 10 ಸಾವಿರ ಕೋಟಿ ರೂ.ಅನುದಾನ ನೀಡುವುದಾಗಿ ಹೊರಗಡೆ ಘೋಷಣೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸರಕಾರಕ್ಕೆ ರೈತರಿಗೆ ಅನುದಾನ ಕೊಡಲು ಹಣ ಇಲ್ಲ. ಅಲ್ಲಿ ಹತ್ತು ಸಾವಿರ ಕೋಟಿ ಕೊಡುತ್ತೀರಿ. ನಾವು ಅಧಿಕಾರದಲ್ಲಿದ್ದಾಗ ಸದನ ನಡೆಯುವಾಗ ಎಲ್ಲಿಯೂ ಈ ರೀತಿ ಘೋಷಣೆಗಳನ್ನು ಮಾಡಿರಲಿಲ್ಲ. ಅಧಿವೇಶನ ನಡೆಯುವಾಗ ಹೊರಗೆ ಅನುದಾನ ಘೋಷಣೆ ಮಾಡುವುದು ಸರಿಯಲ್ಲ ಎಂದರು.

ಈ ರೀತಿ ಘೋಷಣೆ ಮಾಡಿದರೆ ಅಧಿವೇಶನ ಏಕೆ ನಡೆಯಬೇಕು? ಸದನದಲ್ಲಿ ಘೋಷಣೆ ಮಾಡಿ. ಹೊರಗಡೆ ಘೋಷಣೆ ಮಾಡುವುದು ರಾಜಕೀಯ. ತಾಕತ್ತು ನಮಗೂ ಇದೆ. ನಮ್ಮಲ್ಲೂ 85 ಜನರಿದ್ದಾರೆ. ಬರದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಸಾವಿರ ಕೋಟಿ ರೂ.ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದೇವೆ. ಶಿವಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನಿಗೆ ಪರಿಹಾರ ಕೊಡಲು ನಿಮಗೆ ಯೋಗ್ಯತೆ ಇಲ್ಲ. ಅಲ್ಲಿ ಹತ್ತು ಸಾವಿರ ಕೋಟಿ ಕೊಡುತ್ತೀರಿ. ರೈತರ ಶಾಪ ತಟ್ಟಿದರೆ ಸರಕಾರ ಉಳಿಯಲ್ಲ ಎಂದು ಅವರು ತಿಳಿಸಿದರು.

ಸುಳ್ಳು ಸುದ್ದಿ ಸೃಷ್ಟಿಸುವ ಫ್ಯಾಕ್ಟರಿ: ಈ ವೇಳೆ ಆಡಳಿತ ಹಾಗೂ ಬಿಜೆಪಿ ಸದಸ್ಯರ ವಿರುದ್ಧ ವಾಗ್ವಾದ ನಡೆಯಿತು. ಸರಕಾರದ ಸ್ಪಷ್ಟಣೆಗೆ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಬಿಜೆಪಿ ಸದಸ್ಯರ ನಡೆಗೆ ಬೇಸರ ವ್ಯಕ್ತಪಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ವಿಧಾನಸಭೆಯು ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಸೃಷ್ಟಿಸುವ ಫ್ಯಾಕ್ಟರಿ ಆಗಬಾರದು ಎಂದರು.

ಮುಸ್ಲಿಮ್ ಸಮುದಾಯಕ್ಕೆ 10 ಸಾವಿರ ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೊಷಣೆ ಮಾಡಿಲ್ಲ. ಅವರ ಭಾಷಣ ಪೂರ್ಣ ತೆಗೆದು ನೋಡಿ. ಸದನಕ್ಕೆ ತಪ್ಪು ಮಾಹಿತಿ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅಪಚಾರ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಮಾತನಾಡಿ, ಬಿಜೆಪಿಯವರು ಅಸತ್ಯವನ್ನು ಸತ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಈ ವರ್ಷ 4 ಸಾವಿರ ಕೋಟಿ ರೂ.ನೀಡಿದ್ದೇವೆ. ಮುಂದೆ 10 ಸಾವಿರ ಸಾವಿರ ಕೋಟಿ ರೂ.ನೀಡುವುದಾಗಿ ಹೇಳಿದ್ದಾರೆ. ಸತ್ಯಕ್ಕೆ ದೂರವಾದ ಅಂಶಗಳನ್ನು ಕಡತದಿಂದ ತೆಗೆಯಬೇಕು. ಬಿಜೆಪಿಯವರ ಸಭಾತ್ಯಾಗ ಮಾಡಿದ್ದು ಖಂಡನೀಯ ಎಂದರು.

ಬಿಜೆಪಿ ನಡೆಯನ್ನು ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರರು ಖಂಡಿಸಿದರು.

LEAVE A REPLY

Please enter your comment!
Please enter your name here