ಬೆಂಗಳೂರು: ಕನಕಪುರ ರಸ್ತೆಯ ತುರುಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವ ದೃಶ್ಯ ಮತ್ತೊಮ್ಮೆ ಆತಂಕ ಮೂಡಿಸಿದೆ. ಅರಣ್ಯದ ಬಂಡೆಯ ಮೇಲೆ ಕುಳಿತಿದ್ದ ಚಿರತೆಯ ಚಿತ್ರಗಳನ್ನು ಪಕ್ಕದ ಅಪಾರ್ಟ್ಮೆಂಟ್ ನಿವಾಸಿಗಳು ಸೆರೆಹಿಡಿದಿದ್ದು, ಈಗಾಗಲೇ ಆ ಪ್ರದೇಶದ ನಿವಾಸಿಗಳಲ್ಲಿ ಭಯ ಮತ್ತು ಆತಂಕ ಉಂಟಾಗಿದೆ.
ಇದೇ ಮೊದಲ ಬಾರಿ ಅಲ್ಲ — ಎರಡು ಮೂರು ತಿಂಗಳ ಹಿಂದೆ ಕೂಡ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಪ್ರತ್ಯಕ್ಷವಾಗಿರುವುದರಿಂದ ಸ್ಥಳೀಯರು ಮಕ್ಕಳು ಆಟವಾಡುವ ಸ್ಥಳಗಳು ಮತ್ತು ಬೆಳಗಿನ ವಾಕ್ ಪ್ರದೇಶಗಳು ಅಪಾಯಕ್ಕೆ ಒಳಗಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಹೇಳಿಕೆ:
- “ಮಕ್ಕಳು ಇಲ್ಲಿ ಆಟವಾಡ್ತಾರೆ, ನಾವು ವಾಕಿಂಗ್ಗೆ ಬರುತ್ತೇವೆ. ಗೋಡೆ ಕುಸಿದಿರುವುದರಿಂದ ಜಿಂಕೆ, ಕಾಡುಹಂದಿ, ಚಿರತೆಗಳು ಸುಲಭವಾಗಿ ಒಳಬರುತ್ತಿವೆ. ಇದು ದೊಡ್ಡ ಅಪಾಯ,” ಎಂದು ಒಬ್ಬ ನಿವಾಸಿ ಹೇಳಿದರು.
- “ಕಾಂಪೌಂಡ್ ಗೋಡೆ ಕೇವಲ ನಾಲ್ಕು ಅಡಿ ಇದೆ. ಅದನ್ನು ಎತ್ತರಗೊಳಿಸಬೇಕು. ಕುಸಿದಿರುವ ಗೋಡೆಗಳನ್ನು ಕೂಡ ತಕ್ಷಣ ಸರಿಪಡಿಸಬೇಕು,” ಎಂದು ಮತ್ತೊಬ್ಬರು ಒತ್ತಾಯಿಸಿದರು.
ದುರ್ಗಾ ಲೇಔಟ್ ಮತ್ತು ನಂಜಪ್ಪ ಲೇಔಟ್ ಸುತ್ತಮುತ್ತ ಗೋಡೆ ಕುಸಿತಗೊಂಡಿದ್ದು, ಅರಣ್ಯ ಪ್ರದೇಶದಲ್ಲಿರುವ ಜಿಂಕೆ, ಚಿರತೆ ಹಾಗೂ ಕಾಡುಹಂದಿಗಳು ಯಾವಾಗ ಬೇಕಾದರೂ ವಾಸಸ್ಥಳಗಳಿಗೆ ಪ್ರವೇಶಿಸಬಹುದು ಎಂಬ ಭಯವನ್ನು ಹೆಚ್ಚಿಸಿದೆ.
ಅರಣ್ಯ ಇಲಾಖೆ ತಕ್ಷಣವೇ ಕಾಂಪೌಂಡ್ ಗೋಡೆಯನ್ನು ಎತ್ತರಗೊಳಿಸಿ, ಕುಸಿದಿರುವ ಭಾಗವನ್ನು ಪುನರ್ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
