ಬೆಂಗಳೂರು: ಬೆಂಗಳೂರು ಹೊರವಲಯದ ಕಡಬಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ಅದರ ಚಲನವಲನ ಸೆರೆಯಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಡಿಸೆಂಬರ್ 11ರ ರಾತ್ರಿ ದಾಖಲಾಗಿರುವ ಎರಡು ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ, ಚಿರತೆ ಮನೆಗಳ ಸಮೀಪ ಓಡಾಟ ನಡೆಸುತ್ತಿರುವುದು ಹಾಗೂ ನಾಯಿಮರಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣಿಸಿದೆ. ಈ ದೃಶ್ಯಗಳು ಲಾರಿ ರಾಮಣ್ಣ ಎಂಬುವವರ ಮನೆ ಸಮೀಪ ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣವೇ ಎಚ್ಚರಿಕೆ ನೀಡಿದ್ದು, ರಾತ್ರಿ ವೇಳೆಯಲ್ಲಿ ಅನಗತ್ಯ ಓಡಾಟ ನಡೆಸಬಾರದು, ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಹೊರಗೆ ಬಿಡಬಾರದು ಎಂದು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಇದರೊಂದಿಗೆ ಕಡಬಗೆರೆ ಗ್ರಾಮ ಪಂಚಾಯಿತಿ ಸಾರ್ವಜನಿಕ ಎಚ್ಚರಿಕೆ ಪ್ರಕಟಣೆಗಳನ್ನು ಧ್ವನಿವಾಹಿನಿ ಹಾಗೂ ಆಟೋಗಳಲ್ಲಿ ಪ್ರಕಟಿಸುತ್ತಿದ್ದು, ಚಿರತೆ ಯಾವುದೇ ಸಮಯದಲ್ಲಾದರೂ ಮತ್ತೆ ಪ್ರತ್ಯಕ್ಷವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಪತ್ತೆ ಮತ್ತು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಗ್ರಾಮದಲ್ಲಿ ನಿರಂತರ ನಿಗಾವಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯದಲ್ಲಿ ಚಿರತೆ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ.
ಗ್ರಾಮಸ್ಥರು ಶೀಘ್ರದಲ್ಲೇ ಚಿರತೆಯನ್ನು ಸೆರೆಹಿಡಿದು ಸುರಕ್ಷತೆ ಒದಗಿಸುವಂತೆ ಅರಣ್ಯ ಇಲಾಖೆಯನ್ನು ಮನವಿ ಮಾಡಿದ್ದಾರೆ.
