
Satish Jarkiholi has all qualifications to become Chief Minister: Lakshmi Hebbalkar
ಬೆಳಗಾವಿ:
ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಬಿಜೆಪಿ ನಾಯಕರು ಮೊದಲು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಲಿ, ಜನರಿಗೆ ಭರವಸೆ ಕೊಟ್ಟಂತೆ 2 ಕೋಟಿ ಉದ್ಯೋಗ ನೀಡಲಿ. ನಂತರ ಪ್ರತಿಭಟನೆ ಮಾಡಲು ಹೇಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರ ನೀಡಿದ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಇದರ ನಡುವೆಯೂ ಬಿಜೆಪಿಯವರು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅವರಿಗೆ ಮೊದಲು ಎಲ್ಲರ ಖಾತೆಗೆ 15 ಲಕ್ಷ, ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಟ್ಟು ಪ್ರತಿಭಟನೆ ಮಾಡಲು ಹೇಳಿ ಎಂದು ವಾಗ್ದಾಳಿ ನಡೆಸಿದರು.
ನಾವು ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೇವೆ. ನಾವು ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ. ಯಾವ ತೊಂದರೆಯೂ ಇಲ್ಲ, ಗೊಂದಲವೂ ಇಲ್ಲ ಎಂದರು. ಗೃಹ ಲಕ್ಷ್ಮೀ ಯೋಜನೆಯಲ್ಲಿ ಸಹ ಗೊಂದಲ ಇಲ್ಲ. ವ್ಯವಸ್ಥಿತವಾಗಿ ಎಲ್ಲವನ್ನೂ ಜಾರಿಗೊಳಿಸಲಾಗುವುದು. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆ ಇರಲಿ ಎಂದು ವಿನಂತಿಸಿದರು.
ಮುಂಗಾರು ಮಳೆ ವಿಳಂಬದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಳೆ ಶೀಘ್ರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆ ಬಾರದಿದ್ದರೂ ಪರ್ಯಾಯ ವ್ಯವಸ್ಥ ಕುರಿತು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ, ಮೋಡ ಬಿತ್ತನೆ ಕುರಿತು ಗಮನ ಹರಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆ ಇಲ್ಲ. ಕೇವಲ ಅದು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ ಎಂದು ಅವರು ಹೇಳಿದರು.