ಸಂಡೂರು : “ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು. ಅಷ್ಟು ಸತ್ಯವಂತರಾಗಿದ್ದರೆ, ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರ ಶ್ವೇತ ಪತ್ರ ಹೊರಡಿಸಲಿ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʼಈ ಸರಕಾರ ಒಂದೆಡೆ ಕೊಟ್ಟು, ಮತ್ತೊಂದಲ್ಲಿ ಅದರ ಹತ್ತರಷ್ಟು ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರೈತರ ಪಹಣಿ ಶುಲ್ಕ ಹೀಗೆ ಎಲ್ಲದರಲ್ಲೂ ಬೆಲೆ ಏರಿಕೆ ಹೊರೆ ಹೊರಿಸಿದೆʼ ಎಂದು ಆರೋಪಿಸಿದರು.
ʼಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ? ಅದರ ಆದಾಯದ ಮೂಲ, ವೆಚ್ಚ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಲಿ. ಗೃಹಲಕ್ಷ್ಮಿ ಹಣ ಎಷ್ಟು ಜನರಿಗೆ ತಲುಪಿದೆ? ಇದರಲ್ಲಿ ತಾರತಮ್ಯ ತೋರಲಾಗಿದೆ. ಶಕ್ತಿ ಯೋಜನೆ ಕೊಟ್ಟರೆ ಪೆಟ್ರೋಲ್, ಡೀಸೆಲ್, ಪ್ರಯಾಣ ದರ ಹೆಚ್ಚಿಸಿದ್ದಾರೆʼ ಎಂದು ಹೇಳಿದರು.
80 ಸಾವಿರ ಕೋಟಿ ಸಾಲದ ಹೊರೆ: ʼರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 70-80 ಸಾವಿರ ಕೋಟಿ ರೂ. ಸಾಲದ ಹೊರೆ ಹೊತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಅದನ್ನು ಸರಿದೂಗಿಸಲು ಹೆಣಗಾಡುತ್ತಿದೆʼ ಎಂದು ಆರೋಪಿಸಿದರು.
ʼರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. ಮುಡಾ, ವಾಲ್ಮೀಕಿ ಹಗರಣ, ಬೋಗಸ್ ಗ್ಯಾರಂಟಿಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದೆʼ ಎಂದು ಜೋಶಿ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ ಸಿಂಹ, ಡಾ.ಅಶ್ವಥ್ ನಾರಾಯಣ್ ಮತ್ತಿತರು ಇದ್ದರು.