Home ಬೆಂಗಳೂರು ನಗರ ತೃತೀಯ ಲಿಂಗಿಗಳಗಳನ್ನು ಗೌರವಿಸೋಣ, ಅವರ ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ; ಡಿ.ಕೆ. ಶಿವಕುಮಾರ್

ತೃತೀಯ ಲಿಂಗಿಗಳಗಳನ್ನು ಗೌರವಿಸೋಣ, ಅವರ ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ; ಡಿ.ಕೆ. ಶಿವಕುಮಾರ್

76
0

ಬೆಂಗಳೂರು:

‘ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗೂ ತಮ್ಮದೇ ಆದ ಗೌರವವಿದೆ. ಹೀಗಿರುವಾಗ ಗಂಡು, ಹೆಣ್ಣು, ತೃತೀಯ ಲಿಂಗಿಗಳು ಎಂಬ ತಾರತಮ್ಯ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ತೃತೀಯ ಲಿಂಗಿಗಳ ಸ್ವಾಭಿಮಾನದ ಬದುಕಿಗೆ ನಾವೆಲ್ಲರೂ ಕೈಜೋಡಿಸೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೆಸರಾಂತ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ ಅವರ ಆತ್ಮಕತೆ ‘ಕರುಣೆಗೊಂದು ಸವಾಲು’ ಪುಸ್ತಕವನ್ನು ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆ ಮಾಡಿ, ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ನಾನು ಇಲ್ಲಿಗೆ ಬರುವ ಪರಿಸ್ಥಿತಿಯಲ್ಲೇ ಇರಲಿಲ್ಲ. ನಾನು ನಿನ್ನೆ ಬೆಳಗ್ಗೆ ಆರೂವರೆಗೆ ಮನೆ ಬಿಟ್ಟು, ಇಂದು ಬೆಳಗ್ಗೆ ಆರೂವರೆಗೆ ವಾಪಾಸಾಗಿದ್ದೇನೆ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿ, ಪಕ್ಷದಿಂದ ಪರಿಹಾರ ನೀಡುವ ಕಾರ್ಯಕ್ರಮದಲ್ಲಿದ್ದೆ. ಆ 36 ಕುಟುಂಬಗಳ ಕಥೆ, ಸರ್ಕಾರ, ಅಧಿಕಾರಿಗಳು, ಸೇವೆ ಮಾಡಬೇಕಾದವರು ತೋರಿದ ಪ್ರೀತಿ, ವಾತ್ಸಲ್ಯ, ಮಮಕಾರ ಕೇಳಿದರೆ ನೋವಾಗುತ್ತೆ. ಸದ್ಯದಲ್ಲೇ ನಾನು ಆ ನೋವಿನ ಕಥೆಗಳನ್ನು ಬಿಡುಗಡೆ ಮಾಡುತ್ತೇನೆ.

WhatsApp Image 2021 06 28 at 15.05.19

ಅಕ್ಕಯ್ ಪದ್ಮಶಾಲಿ ಅವರು ಆತ್ಮಕಥನದಲ್ಲಿ ಕುಟುಂಬ, ಹೊರಗಿನ ಸಮಾಜ ತಮ್ಮನ್ನು ಯಾವ ರೀತಿ ನೋಡುತ್ತಿತ್ತು, ತಮಗಾದ ಗಾಯಗಳು, ಅನುಭವಿಸಿದ ಯಾತನೆಗಳನ್ನು ವಿವರಿಸಿದ್ದಾರೆ.

ಯಾರೇ ಆಗಲಿ ನೋವು ಅನುಭವಿಸದೇ ಸಾಧನೆ ಮಾಡಲಾಗುವುದಿಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ನಾನು ಅಧಿಕಾರ ಸ್ವೀಕರಿಸುವಾಗ ಹೇಳಿದ್ದೆ. ಅದೇ ರೀತಿ ಅಕ್ಕಯ್ ಪದ್ಮಶಾಲಿ ಅವರು ಕೂಡ ಅನೇಕ ಪೆಟ್ಟುಗಳನ್ನು ತಿಂದು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅದಕ್ಕಾಗಿ ನನ್ನಿಂದ ಹಿಡಿದು ಅಮೆರಿಕದ ಅಧ್ಯಕ್ಷರವರೆಗೂ ಎಲ್ಲರೂ ಅವರನ್ನು ಕರೆಯುತ್ತಿದ್ದಾರೆ.

ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮೊದಲು ಮನುಷ್ಯತ್ವ. ಆಮೇಲೆ ಗಂಡು, ಹೆಣ್ಣು, ಬೇರೆ, ಬೇರೆ ವಿಚಾರ ಬರುತ್ತವೆ. ಪ್ರತಿಯೊಬ್ಬರೂ ಒಂದೊಂದು ಜೀವ. ಆ ಜೀವಕ್ಕೆ ನಾವು ಏನು ಗೌರವ ಕೊಡಬೇಕೋ ಅದನ್ನು ಕೊಡಬೇಕು. ನಮ್ಮ ಧರ್ಮದಲ್ಲಿ ಇಲಿಯನ್ನು ಗಣೇಶನ ವಾಹನ, ಕಾಗೆಯನ್ನು ಶನೇಶ್ವರನ ವಾಹನ, ನವಿಲು ಸುಬ್ರಹ್ಮಣ್ಯನ ವಾಹನ ಎಂದು ಪೂಜನೀಯ ಸ್ಥಾನ ನೀಡುತ್ತಾ ಬಂದಿದ್ದೇವೆ.

ನಮ್ಮ ಊರುಗಳಲ್ಲಿ ಈ ಹಿಂದೆ ದೇವರಿಗೆ ಕೋಣಗಳನ್ನು ಬಲಿ ಕೊಡುತ್ತಿದ್ದರು. ಈಗ ಕುರಿ, ಕೋಳಿ ಕೊಡುತ್ತಾರೆ. ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ. ಅದರರ್ಥ, ಈ ದೇವರಲ್ಲೂ ಬಹಳ ತಾರತಮ್ಯ ಇದೆ. ದೇವರು ಬಲಿ ತೆಗೆದುಕೊಳ್ಳುವಾಗ ಹುಲಿ, ಆನೆ, ಸಿಂಹವನ್ನು ಬಲಿ ಪಡೆಯುವುದಿಲ್ಲ. ಕುರಿ, ಮೇಕೆ ಅಥವಾ ಕೋಣವನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತದೆ. ಬಲಿಷ್ಠವಾಗಿರುವುದನ್ನು ಮುಟ್ಟುವುದಿಲ್ಲ. ಅದೇ ರೀತಿ ಈ ಸಮಾಜದಲ್ಲಿ ನೀವು ಬಲಿ ಆಗಿದ್ದೀರಿ.

ಈ ಹೊಸ ಯುಗದಲ್ಲಿ ಇದನ್ನು ಹೇಗೆ ತಪ್ಪಿಸಬೇಕು? ಈ ವರ್ಗದವರಿಗೆ ಆರ್ಥಿಕ, ಸಾಮಾಜಿಕ, ಮಾನಸಿಕ ಶಕ್ತಿಯನ್ನು ಹೇಗೆ ತುಂಬಬೇಕು ಎಂಬುದರ ಬಗ್ಗೆ ಚಿಂತನೆ ಮಾಡೋಣ. ನೀವೂ ನಾಯಕರಾಗಿ ಬೆಳೆಯಬೇಕು, ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಿಮ್ಮ ಧ್ವನಿ ಇರಬೇಕು. ಆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ.

ಬೇರೆ ದೇಶಗಳಲ್ಲಿ ತೃತೀಯ ಲಿಂಗಿಗಳ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. 1988ರಲ್ಲಿ ನಾನು ಉತ್ತರ ಕೊರಿಯಾದ ಪ್ಯೊಗ್ಯೊಂಗ್ ನಲ್ಲಿ ನಡೆದ ವರ್ಲ್ಡ್ ಯೂಥ್ ಅಂಡ್ ಸ್ಟೂಡೆಂಟ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಎಲ್ಲ ದೇಶಗಳ ಸಂಸ್ಕೃತಿಯ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿ ತೃತೀಯ ಲಿಂಗಿಗಳ ಸಂಸ್ಕೃತಿ ಪ್ರದರ್ಶನ ಅತ್ಯುತ್ತಮ ಎಂದು ಆಯ್ಕೆಯಾಯಿತು.

ಈ ಸಮಾಜದ ಮೂಲ ರಾಮಾಯಣ, ಮಹಾಭಾರತ ಕಾಲದಿಂದಲೂ ಇದೆ. ಅರ್ಜುನ, ಕೃಷ್ಣ ಏನೆಲ್ಲ ರೂಪ ತೊಟ್ಟರು ಎಂಬುದನ್ನು ನೋಡಿದ್ದೇವೆ. ಹೀಗಾಗಿ ನಿಮಗೆ ಯಾವುದೇ ಕೀಳರಿಮೆ ಬೇಡ.

ಅಕ್ಕಯ್ ಪದ್ಮಶಾಲಿ ಅವರು ರಾಜಕೀಯಕ್ಕೆ ಬಂದಿದ್ದು, ಅವರು ನಮ್ಮ ಜತೆ ಇರುತ್ತಾರೆ. ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ನಾನು ಈ ಬಗ್ಗೆ ಮಾತನಾಡುತ್ತೇನೆ. ಗಂಡಿನ ರೂಪ ಕಳೆದುಕೊಂಡು, ಹೆಣ್ಣಿನ ರೂಪ ಹೊತ್ತಿರುವ ಈ ವರ್ಗದವರು ಸಮಾಜ ನೀಡಿರುವ ಕೊಡುಗೆಗಳು ಹಾಗೂ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುತ್ತಾ ಹೇಗೆ ಸಾಗಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮುನ್ನುಡಿ ನೀಡುತ್ತೇನೆ. ಮಾನವೀಯತೆಯೇ ಒಂದು ಧರ್ಮ. ಅದಕ್ಕೆ ನಾವು ಹೆಚ್ಚಿನ ಗೌರವ ನೀಡಬೇಕು.

ಈ ಸಮಾಜದವರು ತಮ್ಮ ಕಾಲ ಮೇಲೆ ನಿಂತು ಹೇಗೆ ಜೀವನ ನಡೆಸಬಹುದು ಎಂಬುದರ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ನೀವು ಶಕ್ತಿ ತುಂಬಬೇಕು. ಅವರನ್ನು ರಸ್ತೆಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಬಾರದು. ಅವರನ್ನು ಕಂಡರೆ ಸಮಾಜ ಗೌರವ ನೀಡುವಂತಾಗಬೇಕು. ಆ ಬಗ್ಗೆ ನೀವು ಚಿಂತನೆ ಮಾಡಬೇಕು. ಮುಂದೆ ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡೋಣ.

ಕರಣೆಗೆ ನಿಮ್ಮ ಸವಾಲಿನ ಜೊತೆ ನಾವು ನಿಲ್ಲುತ್ತೇವೆ. ನಿಮ್ಮ ರೀತಿಯಲ್ಲೇ ನಮ್ಮದೂ ಬೇರೆ, ಬೇರೆ ಅನೇಕ ನೋವಿನ ಕಥೆಗಳಿವೆ. ಅದನ್ನು ಬರೆಯುತ್ತಾ ಕೂತರೆ ಬೇರೆಯದೇ ಆಗುತ್ತದೆ. ನಾವು ಅದನ್ನು ಸಹಿಸಿಕೊಂಡು, ಭಕ್ತ ಕುಂಬಾರ ಮಣ್ಣು ತುಳಿದಂತೆ, ತುಳಿಸಿಕೊಂಡು, ತುಳಿಸಿಕೊಂಡು ಸಮಾಜಕ್ಕೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು, ನೀವೆಲ್ಲ ಸೇರಿ ಕೆಲಸ ಮಾಡೋಣ. ನಾನು ಯಾವಾಗಲು ಹೇಳುವ ಹಾಗೆ ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ನಾವು ನಮ್ಮ ಮೂಲವನ್ನು ಮರೆಯುವುದು ಬೇಡ.

ಖ್ಯಾತ ರಂಗಕರ್ಮಿ ಪ್ರಸನ್ನ, ಸಾಮಾಜಿಕ ಹೋರಾಟಗಾರ್ತಿ ರೂತ್ ಮನೋರಮಾ, ಅಕ್ಕಯ್ ಪದ್ಮಶಾಲಿ, ಲೇಖಕ ಡಾ. ಡೊಮಿನಿಕ್, ಹಿರಿಯ ಪತ್ರಕರ್ತ, ಪ್ರಕಾಶಕ ಜಿ.ಎನ್. ಮೋಹನ್, ಶಾಸಕಿ ಸೌಮ್ಯಾರೆಡ್ಡಿ, ಶಾಸಕ ಎ. ಮಂಜು, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here