ಒಂದೇ ತಿಂಗಳಲ್ಲಿ ಜಪ್ರೀಯತೆ ಕಳೆದುಕೊಂಡ ಸರ್ಕಾರ: ಬಸವರಾಜ ಬೊಮ್ಮಾಯಿ
ಬೆಳಗಾವಿ:
ವಿಧಾನಸಭೆ ಚುನಾವಣೆ ಸೋಲನ್ನು ಮರೆತು ಎಲ್ಲ ನಾಯಕರು ಒಂದಾಗಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಳಗಾವಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲ ನಾಯಕರು, ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡೋಣ ಎಂದು ಹೇಳಿದರು.
ಲೋಕಸಭೆ, ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಆಗಿವೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಬಂದ ಮೇಲೆ ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ ನೀರು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದೇವೆ. ದೇಶ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.
ಪಟ್ನಾದಲ್ಲಿ ನಡೆದ ತೃತೀಯ ರಂಗದ ನಾಯಕರ ಸಭೆಯಲ್ಲಿ ದೇಶದ ಉದ್ಧಾರ ಬಗ್ಗೆ ಚರ್ಚೆ ಆಗಿಲ್ಲ, ನರೇಂದ್ರ ಮೋದಿಯನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಮೋದಿ ಸೋಲ್ಲಲ್ಲ, ರಾಹುಲ್ ಗಾಂಧಿ ಮದುವೆ ಆಗಲ್ಲ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಮೋದಿ ಎದುರಿಸಲು ವಿರೋಧ ಪಕ್ಷದಲ್ಲಿ ಒಬ್ಬ ನಾಯಕ ಇಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಮತ್ತೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಲಿಗೆ ನಾನೇ ಹೊಣೆ
ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ ಎಂದ ಬೊಮ್ಮಾಯಿ. ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ಅನುದಾನದವನ್ನು ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡಿಸೇಲ್ ಇಲ್ಲದೇ ಬಸ್ ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಚುನಾವಣೆಗೆ ಮೊದಲು ಎಲ್ಲವೂ ಫ್ರೀ ಅಂತ ಹೇಳಿ ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ, ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲಾಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ರು,ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಎನ್ನುವುದು ಗೊತ್ತು. ದೆಹಲಿ ಕಾಂಗ್ರೆಸ್ ನವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಎಲ್ಲ ಕಡೆಗಳ ಪರ್ಸಂಟೇಜ್ ಫಿಕ್ಸ್ ಆಗುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಯಶಸ್ವಿ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಕಳೆದ ಹಲವು ದಿನಗಳಿಂದ ಮೋದಿಜೀ ಸರ್ಕಾರದ ಸಾಧನೆ & ಬೆಳಗಾವಿ ಜಿಲ್ಲೆಗೆ ಅವರು ನೀಡಿದ ಕೊಡುಗೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ನಾವೆಲ್ಲರು ಮಾಡುತ್ತಿದ್ದು, ಅದನ್ನು ಇನ್ನೂ ಪರಿಣಾಮಕಾರಿಯಾಗಿ ಮುಂದುವರೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಯಿತು. 2/2#9YearsOfSeva
— Mangal Suresh Angadi (@MangalSAngadi) June 25, 2023
ಯಾರ ಜೊತೆಗೂ ರಾಜಿ ರಾಜಕಾರಣ ಮಾಡಲ್ಲ
ಮೂವತ್ತು ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಯಾರ ಜೊತೆಗೂ ನಾನು ರಾಜೀ ಮಾಡಿಕೊಂಡು ರಾಜಕಾರಣ ಮಾಡಿಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ. ನಾನೇನೂ ಯಾರನ್ನೂ ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜೊತೆಗಿನ ಎಲ್ಲ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ ಎಂದು ಹೇಳಿದರು.
ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ನಾನು ಸಿಎಂ ಆಗಿದ್ದಾಗ ಪಕ್ಷ, ಕಾರ್ಯಕರ್ತರ ಆಶಯದಂತೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ. ಸಿಎಂ ಆಗಿದ್ದಾಗ ಕಾರ್ಯಕರ್ತರ ಹಿತ ಕಾದಿದ್ದೇನೆ, ಮುಂದೆಯೂ ಕಾರ್ಯಕರ್ತರ ಹಿತ ಕಾಯುವೆ ದೇಶ, ಧರ್ಮ ರಕ್ಷಣೆಗೆ ನಾನು ಸದಾ ಜಾಗೃತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಶಾಸಕರಾದ ಬಸನಗೌಡ ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಮಂಗಳಾ ಅಂಗಡಿ, ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.