Home ಬೆಂಗಳೂರು ನಗರ ಪ್ರಜ್ವಲ್ ರೇವಣ್ಣ ಪಾಸ್‍ಪೋರ್ಟ್ ರದ್ದುಗೊಳಿಸಲು ಪತ್ರ : ಗೃಹ ಸಚಿವ ಜಿ.ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪಾಸ್‍ಪೋರ್ಟ್ ರದ್ದುಗೊಳಿಸಲು ಪತ್ರ : ಗೃಹ ಸಚಿವ ಜಿ.ಪರಮೇಶ್ವರ್

23
0

ಬೆಂಗಳೂರು :  ಲೈಂಗಿಕ ಹಗರಣ ಸಂಬಂಧ ಆರೋಪಿ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‍ ಪೋರ್ಟ್ ಅನ್ನು ರದ್ದು ಮಾಡುವಂತೆ ಎಸ್‌ಐಟಿ ಮುಖ್ಯಸ್ಥರು ನ್ಯಾಯಾಲಯದ ವಾರೆಂಟ್ ಆಧಾರಿತವಾಗಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಯವರಿಗೆ ಈ ವಿಚಾರವಾಗಿ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಯಾವುದೇ ಪರಿಣಾಮವಾಗಲಿಲ್ಲ. ನ್ಯಾಯಾಲಯದ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿದ ಆಧಾರದ ಮೇಲೆ ಪೊಲೀಸ್ ಇಲಾಖಾಧಿಕಾರಿಗಳು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲು ಸಾಧ್ಯವಾಗಿದೆ ಎಂದರು.

ಇದರ ಆಧಾರದ ಮೇಲೆ ಕ್ರಮ ಕೈಗೊಂಡು ರಾಜತಾಂತ್ರಿಕತೆಯ ಪಾಸ್‍ ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರಲು ಸಾಧ್ಯವಾಗುವುದಿಲ್ಲ, ವಾಪಸ್ ಮರಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣ ವಾಪಸ್ ಬಂದು ಶರಣಾಗಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿರುವುದು ಅವರ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ. ಪೊಲೀಸರು ಕಾನೂನು ರೀತಿಯ ಕ್ರಮ ಮುಂದುವರೆಸುತ್ತಾರೆ ಎಂದ ಅವರು, ಜೆಡಿಎಸ್ ನಾಯಕರ ಫೋನ್ ಟ್ಯಾಪಿಂಗ್ ಮಾಡಿಲ್ಲ, ಕುಮಾರಸ್ವಾಮಿಯವರ ಬಳಿ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳಿದ್ದರೆ ಕೊಡಲಿ, ಜತೆಗೆ ಎಲ್.ಆರ್.ಶಿವರಾಮೇಗೌಡರ ಆಡಿಯೋ ಪ್ರಕರಣದ ತನಿಖೆ ನಡೆಸುವ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರಕಾರ ಪ್ರತಿ ಹಂತದಲ್ಲೂ ಮಧ್ಯಪ್ರವೇಶಿಸಿ ಸೂಚನೆ ನೀಡುವುದಿಲ್ಲ ಎಂದು ಹೇಳಿದರು.

ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸಂಚು ನಡೆಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರಕ್ಕೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಬರ ನಿರ್ವಹಣೆ, ಅಭಿವೃದ್ಧಿಯಂತಹ ಗಂಭೀರ ಕೆಲಸಗಳಿವೆ. ಇನ್ನೂ, ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ಬಿಜೆಪಿಯವರಿಗೆ ಹೊಟ್ಟೆ ಉರಿ ಇದೆ. ಬಡವರ ಅಭಿವೃದ್ಧಿ ಅವರಿಗೆ ಸಹಿಸಲಾಗುತ್ತಿಲ್ಲ. ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಪರಿಹಾರ ಕೊಡಿಸಲು ವಿಫಲರಾಗಿರುವ ಬಿಜೆಪಿಗರು ಟೀಕೆ ಮಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here