Karnataka Congress is Number one in corruption | Former Union Minister Sadananda Gowda
ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷ ಶುದ್ಧೀಕರಣ ಆಗಬೇಕು.ಈ ನಿಟ್ಟಿನಲ್ಲಿ ಹೈಕಮಾಂಡ್‍ಗೆ ಪತ್ರ ಬರೆದಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಪಕ್ಷ ಸರಿಯಾಗಬೇಕು ಎಂದೇ ನಾನು ಹೈಕಮಾಂಡ್‍ಗೆ ಮೊನ್ನೆ ಪತ್ರ ಬರೆದಿದ್ದೇನೆ. ಪಕ್ಷ ಸರಿ ಮಾಡಬೇಕೆಂದು ಮನವಿ ಮಾಡಿದ್ದೇನೆ. ಪಕ್ಷ ಸರಿಯಾಗದಿದ್ದರೆ ನನ್ನನ್ನ ಹೊರಗೆ ಹಾಕಲಿ” ಎಂದರು.
ನಮ್ಮ ನಿರೀಕ್ಷೆಯಂತೆ ಫಲಿತಾಂಶ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಘಟನಾತ್ಮಕ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತ ಪೂರ್ವ ಗೆಲುವಿನ ಬಳಿಕವೂ ನಮ್ಮ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ವಿಫಲವಾಗಿದೆ. ಇದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರ ತಪ್ಪಿದೆ ಎಂದು ಅವರು ತಿಳಿಸಿದರು.
ವಿಪಕ್ಷ ನಾಯಕ ಅಂದರೆ ಬರೀ ಜಗಳ ಮಾಡುವುದಲ್ಲ. ಅಧ್ಯಯನದ ಅಗತ್ಯವಿದೆ.ಜತೆಗೆ, ಸೂಕ್ತ ಸಮಯಕ್ಕೆ ಪ್ರತಿರೋಧ ಒಡ್ಡುವ ನಾಯಕರ ಅವಶ್ಯಕತೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಇದೆ. ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಮಾನ್ಯರಿಗೆ ಸಾಧ್ಯ ಇಲ್ಲ ಎನ್ನುವುದನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
