ಬೆಂಗಳೂರು:
ಲೋಕಸಭಾ ಚುನಾವಣೆ-2024 ಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ತಯಾರಿ ಆರಂಭವಾಗಿದ್ದರೆ, ಇತ್ತ ಕಾಂಗ್ರೆಸ್ ಸಹ ತನ್ನ ರಣತಂತ್ರಗಳನ್ನು ಹೆಣೆಯಲು ಸಜ್ಜುಗೊಂಡಿದೆ.
28 ಲೋಕಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ವಿಷಯವಾಗಿ ವಿವರಗಳನ್ನು ಸಲ್ಲಿಸಲು ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಆಡಳಿತಾರೂಢ ಪಕ್ಷ ವೀಕ್ಷಕರನ್ನು ನೇಮಕ ಮಾಡಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವೀಕ್ಷಕರನ್ನಾಗಿ ನೇಮಕ ಮಾಡಲಾಗಿರುವ ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ವೀಕ್ಷಕರು ಸಭೆಗಳನ್ನು ನಡೆಸಿ, ಸಂಭಾವ್ಯ, ಸಮರ್ಥ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ವರದಿಗಳನ್ನು ಸಲ್ಲಿಸುತ್ತಾರೆ ಎಂದು ಡಿಸಿಎಂ ತಿಳಿಸಿದ್ದಾರೆ.
ಬಾಗಲಕೋಟೆ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಬೆಂಗಳೂರು ಕೇಂದ್ರಕ್ಕೆ ಎನ್ ಎಸ್ ಬೋಸರಾಜು, ಬೆಂಗಳೂರು ಉತ್ತರಕ್ಕೆ ಡಾ.ಜಿ ಪರಮೇಶ್ವರ್, ಬೆಂಗಳೂರು ಗ್ರಾಮಾಂತರಕ್ಕೆ ಕೆ ವೆಂಕಟೇಶ್, ಬೆಂಗಳೂರು ದಕ್ಷಿಣಕ್ಕೆ ಡಾ. ಶರಣ್ ಪ್ರಕಾಶ್ ಪಾಟೀಲ್, ಬೆಳಗಾವಿಯಲ್ಲಿ ಶಿವರಾಜ್ ತಂಗಡಗಿ, ವಿಜಯಪುರಕ್ಕೆ ಸತೀಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರಕ್ಕೆ ಬಿಝೆಡ್ ಝಮೀರ್ ಅಹ್ಮದ್ ಖಾನ್, ಧಾರವಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ ಚಿಕ್ಕಮಗಳೂರಿಗೆ ಮಂಕಾಳ ವೈದ್ಯ, ಶಿವಮೊಗ್ಗಗೆ ಕೆಎಸ್ ರಾಜಣ್ಣ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿತ್ತು.