ಬೆಂಗಳೂರು:
ನಗರದ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ಮೆಂಟ್ ಗೆ ಖಾತಾ ನೀಡುವ ವಿಚಾರವಾಗಿ 5 ಲಕ್ಷ ರೂ. ಲಂಚ ಪಡೆದ ಬಿಬಿಎಂಪಿ ಮಹದೇವಪುರ ವಲಯ ಕಂದಾಯ ನಿರೀಕ್ಷಕ ನಟರಾಜ್ ಮತ್ತು ಅವರ ಪರವಾಗಿ ಹಣ ತೆಗೆದುಕೊಂಡಂತಹ ಏಜೆಂಟ್ ಪವನ್ ಎಂಬುವವರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನಗರದ ಕೊಡಿಗೆಹಳ್ಳಿಯಲ್ಲಿ ಮುಕುಂದ ಡೆವಲಪರ್ಸ್ ನಿಂದ ಬೃಂದಾವನ ಅಪಾರ್ಟ್ಮೆಂಟ್ ನಿರ್ಮಿಸಿದ್ದು, ಅಪಾರ್ಟ್ಮೆಂಟ್ ನಲ್ಲಿ ಬರುವ 79 ಫ್ಲಾಟ್ ಗಳಿಗೆ ಖಾತಾ ಕೋರಿ ಮಂಜುನಾಥ್ ರವರು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಖಾತಾ ಮಾಡಿಕೊಡಬೇಕಾದರೆ ಒಂದು ಫ್ಲಾಟ್ಗೆ 10 ಸಾವಿರದಂತೆ 79 ಫ್ಲಾಟ್ಗಳಿಗೆ 7.9 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ ನಟರಾಜ್, ಮುಂಗಡವಾಗಿ 5 ಲಕ್ಷ ರೂ. ನೀಡುವಂತೆ ತಿಳಿಸಿದ್ದರು. ಈ ಸಂಬಂಧ ಮಂಜುನಾಥ್ ಬೆಂಗಳೂರು ನಗರದ ಲೋಕಾಯುಕ್ತ ಘಟಕಕ್ಕೆ PC Act.1988 ಪ್ರಕಾರ ದೂರು ನೀಡಿದ್ದರು.
ಅದರಂತೆ, 5 ಲಕ್ಷ ರೂ.ಗಳನ್ನು ಶುಕ್ಷವಾರ ತಲುಪಿಸುವಂತೆ ಸೂಚಿಸಿದ್ದ ನಟರಾಜ್ ಮಾತಿನಂತೆ ಮಂಜುನಾಥ್ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ 5 ಲಕ್ಷ ರೂ. ನಗದನ್ನು ಮಹದೇವಪುರ ವಲಯ ಕಚೇರಿಗೆ ತೆಗೆದುಕೊಂಡು ಹೋಗಿರುತ್ತಾರೆ. ಈ ವೇಳೆ ನಟರಾಜ್ ಸ್ಥಳದಲ್ಲಿದ್ದ ಪವನ್ ಬಳಿ ಹಣ ಕೊಡುವಂತೆ ಸೂಚಿಸಿದರು. ಪವನ್ ಹಣ ಪಡೆದು ನಟರಾಜ್ ನೀಡುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ಕೂಡಲೆ ದಾಳಿ ನಡೆಸಿ ಇಬ್ಬರನ್ನೂ ಸ್ಥಳದಲ್ಲೇ ಬಂಧಿಸಿದರು.
ಕಾರ್ಯಾಚರಣೆಯ ವೇಳೆ ಡಿ.ಎಸ್.ಪಿ ಬಸವರಾಜ್ ಮುಗ್ದಂ ನೇತೃತ್ವದ ತಂಡವು ಸಾಕ್ಷಿ ಸಮೇತ ಕಂದಾಯ ನಿರೀಕ್ಷಕ ಹಾಗೂ ಏಜೆಂಟ್ ಪವನ್ ಇಬ್ಬರನ್ನೂ ಬಂಧಿಸಿದ್ದಾರೆ.