Home ಅಪರಾಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತ ಶೋಧ: ಕೆಜಿಗಟ್ಟಲೆ ಚಿನ್ನಾಭರಣ, ನಗದು, ಆಸ್ತಿ ಪತ್ರ ವಶ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತ ಶೋಧ: ಕೆಜಿಗಟ್ಟಲೆ ಚಿನ್ನಾಭರಣ, ನಗದು, ಆಸ್ತಿ ಪತ್ರ ವಶ

51
0
Channagiri BJP MLA Madal Virupakshappa
ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ದಾವಣಗೆರೆ:

ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ಮಾಡಾಳ್ ನಿವಾಸದಲ್ಲಿ ಸತತ 10 ಗಂಟೆಗಳಿನಿಂದ ನಿರಂತರವಾಗಿ ಲೋಕಾಯುಕ್ತ ಪೊಲೀಸರು ನಡೆಸಿದ್ದ ದಾಳಿ ಮುಕ್ತಾಯಗೊಂಡಿದ್ದು ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

ಮಾಡಾಳ್ ನಿವಾಸದಲ್ಲಿ 2,800 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಲೋಕಾಯುಕ್ತ ಪೊಲೀಸರು ಚಿನ್ನ, ಬೆಳ್ಳಿ, ನಗದು ಮತ್ತು ಆಸ್ತಿ ಪತ್ರಗಳ ಪಟ್ಟಿ ಮಾಡಿದ್ದು ಇದಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪತ್ನಿ ಲೀಲಾವತಿಯವರಿಂದ ಸಹಿ ಪಡೆದಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಪ್ರಶಾಂತ್‌ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಲಂಚ ಪ್ರಕರಣದಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ಬಿಜೆಪಿ ಶಾಸಕರಿಗೆ ಈಗ ಬಂಧನ ಭೀತಿ ಎದುರಾಗಿದೆ.

ಶ್ರೇಯಸ್ ಕಶ್ಯಪ್​ ಅವರು ನೀಡಿದ್ದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ಮಾಡಾಳ್ ವಿರೂಪಾಕ್ಷಪ್ಪ ಎ1(ಮೊದಲ ಆರೋಪಿ) ಆಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಎ2(2ನೇ ಆರೋಪಿ), ಕೆಎಸ್​ಡಿಎಲ್​ ಅಕೌಂಟೆಂಟ್​ ಸುರೇಂದ್ರ ಎ3, ಮಾಡಾಳ್​ ಪ್ರಶಾಂತ್ ಸಂಬಂಧಿ ಸಿದ್ದೇಶ್ ಎ4, ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಎ5, ಅರೋಮಾ ಕಂಪನಿ ಸಿಬ್ಬಂದಿ ಗಂಗಾಧರ ಎ6 ಆಗಿದ್ದಾರೆ.

ಸದ್ಯ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ. ಚನ್ನೇಶಪುರ ಗ್ರಾಮದಲ್ಲಿರುವ ಶಾಸಕರ​ ನಿವಾಸ, ಮಾವಿನಹೊಳೆ ಬಳಿ ಇರುವ ಮಾಡಾಳ್ ಕುಟುಂಬದ ಕ್ರಷರ್ ಕಚೇರಿ, ಮಾವಿನಕಟ್ಟೆ ಗ್ರಾಮದ ಬಳಿ ಇರುವ ತೋಟದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.

LEAVE A REPLY

Please enter your comment!
Please enter your name here