ಬೆಂಗಳೂರು: ಬೆಂಗಳೂರು ನಗರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವತಿಯಿಂದ ‘ಅಂಬಾರಿ’ ಡಬಲ್ ಡೆಕ್ಕರ್ ಪ್ರವಾಸಿ ಬಸ್ ಸೇವೆ ಬುಧವಾರ ಅಧಿಕೃತವಾಗಿ ಆರಂಭಗೊಂಡಿದೆ. ನಗರದ ರವೀಂದ್ರ ಕಲಾಕ್ಷೇತ್ರ ಎದುರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಪ್ರವಾಸೋದ್ಯಮ ಇಲಾಖೆಯ ಅಂಗ ಸಂಸ್ಥೆಯಾಗಿರುವ KSTDC ಕಳೆದ 55 ವರ್ಷಗಳಿಂದ ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದು, ದೇಶ-ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ” ಎಂದರು. KSTDC ಅಧ್ಯಕ್ಷ ಶ್ರೀನಿವಾಸ್ ಎಂ, ಶಾಸಕ ಉದಯ್ ಬಿ. ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುನಾಥ್, ಪ್ರವಾಸೋದ್ಯಮ ನಿರ್ದೇಶಕಿ ಗಾಯತ್ರಿ, KSTDC ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್
ಬೆಂಗಳೂರು ಪ್ರವಾಸೋದ್ಯಮವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಲಂಡನ್ ಶೈಲಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ಗಳನ್ನು ಪರಿಚಯಿಸಲಾಗಿದ್ದು, ಪ್ರಾರಂಭಿಕ ಹಂತದಲ್ಲಿ ಮೂರು ಬಸ್ಗಳನ್ನು ನಗರದಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.
ಬಸ್ ಮಾರ್ಗ
ಜ.21ರಿಂದ ಡಬಲ್ ಡೆಕ್ಕರ್ ಬಸ್ ಈ ಮಾರ್ಗದಲ್ಲಿ ಸಂಚರಿಸಲಿದೆ:
ರವೀಂದ್ರ ಕಲಾಕ್ಷೇತ್ರ – ಕಾರ್ಪೊರೇಷನ್ ಸರ್ಕಲ್ – ಹಡ್ಸನ್ ವೃತ್ತ – ಕಸ್ತೂರಬಾ ರಸ್ತೆ – ವಿಶ್ವೇಶ್ವರಯ್ಯ ಮ್ಯೂಸಿಯಂ – ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ – ಅಂಚೆ ಕಚೇರಿ – ಹೈಕೋರ್ಟ್/ವಿಧಾನಸೌಧ – ಕೆ.ಆರ್. ವೃತ್ತ – ಹಡ್ಸನ್ ವೃತ್ತ – ಕಾರ್ಪೊರೇಷನ್ ಸರ್ಕಲ್ – ರವೀಂದ್ರ ಕಲಾಕ್ಷೇತ್ರ
ದರ ಮತ್ತು ಸೌಲಭ್ಯಗಳು
- ಪ್ರತಿ ವ್ಯಕ್ತಿಗೆ ದರ: ₹180 (ಒಂದು ದಿನ)
- ಲೋಯರ್ ಡೆಕ್: ಹವಾನಿಯಂತ್ರಿತ, ಐಷಾರಾಮಿ ಆಸನಗಳು
- ಅಪ್ಪರ್ ಡೆಕ್: 20 ಆಸನಗಳು – ಎತ್ತರದಿಂದ ನಗರ ವೀಕ್ಷಣೆ
- ಮೈಕ್ ವ್ಯವಸ್ಥೆ: ಪ್ರವಾಸಿ ತಾಣಗಳ ಮಾಹಿತಿ ನೀಡಲು
ಪ್ರವಾಸಿಗರು ಬೆಂಗಳೂರಿನ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಮೇಲ್ಮೈಯಿಂದ ವೀಕ್ಷಿಸುವ ಅಪರೂಪದ ಅನುಭವ ಪಡೆಯಬಹುದು ಎಂದು ಸಚಿವರು ಹೇಳಿದರು.
ಮುಂದಿನ ಯೋಜನೆ
ಮುಂದಿನ ದಿನಗಳಲ್ಲಿ ಪ್ರತ್ಯೇಕ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಬುಕ್ಕಿಂಗ್ ಮಾಹಿತಿ
- ಜಾಲತಾಣ: www.kstdc.co
- ದೂರವಾಣಿ: 080-4334 4334 / 4335
- ಮೊಬೈಲ್: 89706 50070 / 89706 50075
