ಬೆಂಗಳೂರು, ಮಾರ್ಚ್ 23: ರಾಜ್ಯದಲ್ಲಿ ಉಂಟಾಗಿರುವ ಕಮರ್ಷಿಯಲ್ LPG ಸಿಲಿಂಡರ್ ಕೊರತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಎಲ್ಲಾ ಕಮರ್ಷಿಯಲ್ LPG ಬಳಕೆದಾರರು—ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್ ಹಾಗೂ ಫುಡ್ ಪ್ರೊಸೆಸಿಂಗ್ ಘಟಕಗಳು ಸೇರಿದಂತೆ—ಒಂದು ವಾರದೊಳಗೆ GAIL ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಗ್ಯಾಸ್ ಪೂರೈಕೆ ವ್ಯತ್ಯಯ ಹಾಗೂ ಬ್ಲಾಕ್ ಮಾರ್ಕೆಟ್ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ.
ವಸಂತನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ IOC, HPCL, BPCL, GAIL ಅಧಿಕಾರಿಗಳು ಹಾಗೂ ಹೋಟೆಲ್ ಸಂಘದ ಪ್ರತಿನಿಧಿಗಳು ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದ LPG ಸಮಸ್ಯೆಯನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 20% ಪೂರೈಕೆಗೆ ಅನುಮತಿ ದೊರೆತಿದ್ದು, ಇದರಿಂದ ಕೆಲವು ಮಟ್ಟಿಗೆ ಪರಿಸ್ಥಿತಿ ಸುಧಾರಣೆ ಸಾಧ್ಯವಾಗಿದೆ. ಆದರೆ, ಹೋಟೆಲ್ ಮತ್ತು ಸೇವಾ ವಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕನಿಷ್ಠ 50% ಪೂರೈಕೆ ಅಗತ್ಯವಿದೆ ಎಂದು ಸ್ಪಷ್ಟಪಡಿಸಿ, ಈ ಬಗ್ಗೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ಪೂರೈಕೆಯನ್ನು ಸ್ಥಿರಗೊಳಿಸಲು ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹಿಂದಿನಂತೆ ದಿನಕ್ಕೆ ಸುಮಾರು 7,000 ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆ ನಡೆಯುತ್ತಿದ್ದರೆ, ಈಗ ಅದನ್ನು 15,000–16,000 ಸಿಲಿಂಡರ್ಗಳಿಗೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸುಮಾರು 10,000 ಸಿಲಿಂಡರ್ಗಳನ್ನು ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್ ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಮೀಸಲಿಡಲಾಗಿದೆ. ಜೊತೆಗೆ ಕೃಷಿ, ಔಷಧೋದ್ಯಮ, ಮೀನುಗಾರಿಕೆ, ಸೆರಿಕಲ್ಚರ್ ಸೇರಿದಂತೆ ಅಗತ್ಯ ವಲಯಗಳಿಗೆ ಸುಮಾರು 500 ಸಿಲಿಂಡರ್ಗಳನ್ನು ಪ್ರತ್ಯೇಕವಾಗಿ ಆದ್ಯತೆಯೊಂದಿಗೆ ಮೀಸಲಿಡಲಾಗಿದೆ.
ಬ್ಲಾಕ್ ಮಾರ್ಕೆಟ್ ನಿಯಂತ್ರಣ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಕಮರ್ಷಿಯಲ್ LPG ಬಳಕೆದಾರರಿಗೆ GAIL ನೋಂದಣಿ ಕಡ್ಡಾಯ ಮಾಡಲಾಗಿದೆ. ದಾಖಲೆ ಆಧಾರಿತ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ನಿಜವಾದ ಬಳಕೆದಾರರಿಗೆ ಗ್ಯಾಸ್ ತಲುಪಿಸುವುದು ಹಾಗೂ ದುರ್ಬಳಕೆಯನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. ಇದೇ ವೇಳೆ, ಮುಂದಿನ ದಿನಗಳಲ್ಲಿ ಪೈಪ್ಲೈನ್ ಆಧಾರಿತ ಗ್ಯಾಸ್ ಪೂರೈಕೆಯನ್ನು ವಿಸ್ತರಿಸಲು ಈ ಕ್ರಮ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಕಮರ್ಷಿಯಲ್ ಬಳಕೆದಾರರು ಏಳು ದಿನಗಳೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದ್ದು, ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಪೂರೈಕೆ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಸರ್ಕಾರವು ಈ ಕ್ರಮಗಳ ಅನುಷ್ಠಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದ್ದು, ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ಪೂರೈಕೆಯ ಸ್ಥಿತಿ ಮತ್ತು ಸುಧಾರಣೆ ಕುರಿತು ಪರಿಶೀಲನೆ ನಡೆಸಲಿದೆ.
ರಾಜ್ಯ ಸರ್ಕಾರ, ತೈಲ ಕಂಪನಿಗಳು ಹಾಗೂ ಕೇಂದ್ರದ ನಡುವೆ ಸಮನ್ವಯದ ಮೂಲಕ LPG ಸಮಸ್ಯೆಯನ್ನು ಹಂತ ಹಂತವಾಗಿ ನಿಯಂತ್ರಣಕ್ಕೆ ತರಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಆದಾಗ್ಯೂ, ನಿರಂತರವಾಗಿ ಹೆಚ್ಚಿನ ಪೂರೈಕೆ ಮತ್ತು ಸುಗಮ ವಿತರಣಾ ವ್ಯವಸ್ಥೆ ಅಗತ್ಯವಿದೆ ಎಂಬುದನ್ನು ವಲಯದ ಪ್ರತಿನಿಧಿಗಳು ಒತ್ತಿಹೇಳುತ್ತಿದ್ದಾರೆ.
ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್,ದಿವ್ಯ, ಮುರಳಿ ಚಾರ್,ಸುಬ್ರತ್ ಚಟರ್ಜಿ,ರಾಜೇಶ್ ಸಿಂಗ್,ಸಂಜಯ್ ಕುಮಾರ್ ಸಿಂಗ್,ಪ್ರಣಯ ದೇವನಾಗನ್,ರವಿಕುಮಾರ್ ತಂಡಲ್,ಪ್ರಸೂನ್ , ಉಪಸ್ಥಿತರಿದ್ದರು
