ಹಾಸನ: ಈ ವರ್ಷದ ಹಾಸನಾಂಬೆ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಒಟ್ಟು 23 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದು, ಈ ಬಾರಿ ಉತ್ಸವವು ಭಕ್ತರ ಸಂಖ್ಯೆಯಲ್ಲಿಯೂ, ಆದಾಯದಲ್ಲಿಯೂ ದಾಖಲೆ ನಿರ್ಮಿಸಿದೆ. ದೇವಾಲಯದ ಆಡಳಿತ ಮಂಡಳಿಯ ಪ್ರಕಾರ, ಟಿಕೆಟ್ ಮಾರಾಟ, ಪ್ರಸಾದ ಹಾಗೂ ಹೂಂಡಿ ಕಾಣಿಕೆಗಳಿಂದ ₹20 ಕೋಟಿಗೂ ಹೆಚ್ಚು ಆದಾಯ ಬಂದಿದೆ.
ಭಕ್ತರ ಅನಿಸಿಕೆಯಲ್ಲಿ ಈ ಬಾರಿ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೆಳಗ್ಗೆ ಕೆಲ ಸಮಯಗಳಲ್ಲಿ ಕೇವಲ 15 ನಿಮಿಷಗಳಲ್ಲೇ ದೇವಿಯ ದರ್ಶನ ಭಾಗ್ಯ ಸಿಕ್ಕಿದ ಭಕ್ತರು ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ ಮಧ್ಯಾಹ್ನದ ವೇಳೆಗೆ ಸಾಲುಗಳು ಮತ್ತೆ ತುಂಬಿಕೊಂಡು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದಿದ್ದ ದಂಪತಿ ಸಹ ಕುಟುಂಬ ಸಮೇತ ಹಾಸನಾಂಬೆಯ ದರ್ಶನ ಪಡೆದರು.
“ನಾವು ಪ್ರತೀ ವರ್ಷ ಹಾಸನಾಂಬೆ ದರ್ಶನಕ್ಕಾಗಿ ಹಾಲಿಡೇ ಬುಕ್ ಮಾಡುತ್ತೇವೆ. ಕಳೆದ 10–15 ವರ್ಷಗಳಿಂದ ಬರುತ್ತಿದ್ದೇವೆ. ಈ ಬಾರಿ ವ್ಯವಸ್ಥೆಯಲ್ಲಿ ತುಂಬಾ ಸುಧಾರಣೆ ಕಂಡಿದ್ದೇವೆ,” ಎಂದು ಅವರು ಹೇಳಿದರು.
ದೇವಾಲಯ ಆಡಳಿತದ ಪ್ರಕಾರ, ನಾಳೆ ಹಾಸನಾಂಬೆ ದರ್ಶನಕ್ಕೆ ಕೊನೆಯ ದಿನವಾಗಿದ್ದು, ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಗುತ್ತದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಇರುತ್ತದೆ. ರಾತ್ರಿ 7 ರಿಂದ ಮಧ್ಯರಾತ್ರಿ 12ರವರೆಗೆ ನೈವೇದ್ಯ ಪೂಜೆ ನಡೆಯಲಿದೆ ಮತ್ತು ನಂತರ ಮುಂಜಾನೆ 5ರವರೆಗೆ ದರ್ಶನ ಅವಕಾಶ ಇರಲಿದೆ.
“ಇಲ್ಲಿವರೆಗೆ ₹20 ಕೋಟಿ ಆದಾಯ ದಾಖಲಾಗಿದೆ. ಲಕ್ಷಾಂತರ ಜನರು ಭಕ್ತಿಭಾವದಿಂದ ಹಾಸನಾಂಬೆ ದರ್ಶನ ಪಡೆದಿದ್ದಾರೆ,” ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
14 ದಿನಗಳ ಹಾಸನಾಂಬೆ ಉತ್ಸವ ಭಕ್ತರ ನಂಬಿಕೆ, ಉತ್ಸಾಹ ಮತ್ತು ಭಾವನಾತ್ಮಕ ಶ್ರದ್ಧೆಗೆ ಸಾಕ್ಷಿಯಾಗಿ ನಾಳೆ ಮುಕ್ತಾಯಗೊಳ್ಳಲಿದೆ.
