ಬೆಂಗಳೂರು: ಪಶ್ಚಿಮ ಬೆಂಗಳೂರಿನ ಚಂದ್ರ ಲೇಔಟ್ ಬಿಎಂಟಿಸಿ ಡಿಪೋ ಸಮೀಪ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ಗೆ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಳಗ್ಗೆ ಸುಮಾರು 10 ಗಂಟೆ 20 ನಿಮಿಷ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು.
ಪ್ರಾಥಮಿಕ ಮಾಹಿತಿಯಂತೆ, ಬಸ್ ಅನ್ನು ಡಿಪೋ ಸಮೀಪ ಪಾರ್ಕ್ ಮಾಡಲಾಗಿತ್ತು. ಅದರಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ. ಹಠಾತ್ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಧಗಧಗಿಸಿ ಸುಟ್ಟು ಭಸ್ಮವಾಗಿದೆ.
ಘಟನೆಯ ವೇಳೆ ಅಲ್ಲಿದ್ದ ಸ್ಥಳೀಯರು ಬೆಂಕಿಯ ತೀವ್ರತೆಯನ್ನು ನೋಡಿ ಆತಂಕಕ್ಕೊಳಗಾದರು. ಪಕ್ಕದಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳಿಗೂ ಬೆಂಕಿ ಅಂಟಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಫೈರ್ ಎಂಜಿನ್ನೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಆಗಲೇ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
ಸ್ಥಳೀಯರ ಪ್ರಕಾರ, ಈ ಬಸ್ ಅನ್ನು ಸುಮಾರು ಎರಡು-ಮೂರು ತಿಂಗಳ ಹಿಂದೆ ಮಾತ್ರ ಖರೀದಿಸಲಾಗಿತ್ತು. ಮಾಲೀಕರು ವಾಹನವನ್ನು ಪಾರ್ಕ್ ಮಾಡಿ ಕೆಲವೇ ನಿಮಿಷಗಳ ಹಿಂದೆ ಸ್ಥಳ ತೊರೆದಿದ್ದರು ಎನ್ನಲಾಗಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಇಂಧನ ಸೋರಿಕೆ ಅಥವಾ ದುಷ್ಕೃತ್ಯ ಕಾರಣವಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
