ಬೆಂಗಳೂರು: ನಗರದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮಜೆಸ್ಟಿಕ್) ನಲ್ಲಿ ಶನಿವಾರ ಮಧ್ಯಾಹ್ನ 40 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮೆಟ್ರೋ ರೈಲು ಸೇವೆಯಲ್ಲಿ ಸುಮಾರು 30 ನಿಮಿಷಗಳ ವ್ಯತ್ಯಯ ಉಂಟಾಯಿತು.
ಘಟನೆ ಮಧ್ಯಾಹ್ನ 3.17 ಗಂಟೆಗೆ ನಡೆದಿದೆ. ಹಸಿರು ಮಾರ್ಗದ ರೈಲು ಬರುವಾಗ ಆ ವ್ಯಕ್ತಿ ಏಕಾಏಕಿ ಹಳಿಯ ಮೇಲೆ ಹಾರಿದನು. ತಕ್ಷಣ ರೈಲು ನಿಂತು ಆತನ ದೇಹ ಹಳಿಯಡಿ ಸಿಲುಕಿಕೊಂಡಿತು. ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ರೈಲನ್ನು ಸ್ವಲ್ಪ ಹಿಂದಕ್ಕೆ ತೆಗೆದು ಆತನನ್ನು ರಕ್ಷಿಸಿದರು.
ಆತ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು. ವೈದ್ಯರ ಪ್ರಕಾರ ಆತನ ಸ್ಥಿತಿ ಆತಂಕಕರವಾಗಿದೆ. ಉಪ್ಪಾರಪೇಟೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯಿಂದಾಗಿ ಮಾಧವರ – ನ್ಯಾಷನಲ್ ಕಾಲೇಜು – ರಾಜಾಜಿನಗರ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ತಾತ್ಕಾಲಿಕವಾಗಿ ಶಾರ್ಟ್ ಲೂಪ್ ರೈಲು ಸೇವೆ ಆರಂಭಿಸಲಾಯಿತು.
ಬಿಎಂಆರ್ಸಿಎಲ್ ಅಧಿಕೃತ ಪ್ರಕಟಣೆ:
“ಇಂದು (04.10.2025) ರಂದು ಸುಮಾರು 15.17 ಗಂಟೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್ನಲ್ಲಿ ಮಾಧವಾರ ಕಡೆಗೆ ಹೋಗುವ ಹಸಿರು ಮಾರ್ಗದ ರೈಲಿನ ಹಳಿಗೆ ಒಬ್ಬ ಪ್ರಯಾಣಿಕ ಹಾರಿದ ಪರಿಣಾಮ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಸದ್ಯ ಪ್ರಯಾಣಿಕನನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಮಯದಲ್ಲಿ ರೇಷ್ಮೆ ಸಂಸ್ಥೆ, ನ್ಯಾಷನಲ್ ಕಾಲೇಜು, ರಾಜಾಜಿನಗರ ಮತ್ತು ಮಾಧಾವರ ನಡುವೆ ಶಾರ್ಟ್ ಲೂಪ್ ಸೇವೆ ನಡೆಸಲಾಯಿತು. ಸುಮಾರು 15.47 ಗಂಟೆಗೆ ಸಾಮಾನ್ಯ ರೈಲು ಸೇವೆ ಪುನರಾರಂಭವಾಯಿತು.”
— ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಎಂಆರ್ಸಿಎಲ್
ಮೆಟ್ರೋ ಸುರಕ್ಷತಾ ಕ್ರಮಗಳ ಕುರಿತು ಪುನಃ ಚರ್ಚೆ:
ಈ ಘಟನೆಯು ಮೆಟ್ರೋ ನಿಲ್ದಾಣಗಳಲ್ಲಿ ಪುನಃ ಸುರಕ್ಷತಾ ಕ್ರಮಗಳ ಕುರಿತ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ತಿಂಗಳಲ್ಲಿ ಆತ್ಮಹತ್ಯೆ ಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪ್ರೊಟೆಕ್ಟಿವ್ ಸ್ಕ್ರೀನ್ ಡೋರ್ಗಳು ಅಳವಡಿಸಲು ಪ್ರಯಾಣಿಕರಿಂದ ಬೇಡಿಕೆ ಏರಿದೆ.
ಇತರ ಪ್ರಮುಖ ನಗರಗಳ ಮೆಟ್ರೋ ವ್ಯವಸ್ಥೆಗಳಲ್ಲಿ ಈ ರೀತಿಯ ಬಾಗಿಲುಗಳನ್ನು ಅಳವಡಿಸಿರುವುದಾದರೂ, ಬಿಎಂಆರ್ಸಿಎಲ್ ಅಧಿಕಾರಿಗಳು ವೆಚ್ಚದ ಕಾರಣದಿಂದ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
