
Man died after falling down while crossing culvert in Mangalore
ಉಳ್ಳಾಲ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು ಮಂಗಳೂರಿನಲ್ಲಿ ಮೋರಿ ದಾಟುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಮನೆ ಸಮೀಪದ ಮೋರಿ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯತಪ್ಪಿ ಬಿದ್ದು ಮಳೆ ನೀರಿ ಕೊಚ್ಚಿ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ(52 ವರ್ಷ) ಮೃತ ವ್ಯಕ್ತಿಯಾಗಿದ್ದು, ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದರು ಎಂದು ತಿಳಿದುಬಂದಿದೆ. ಇಂದು ಕೆಲಸ ಮುಗಿಸಿ ಇಂದು ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮನೆ ಸಂಪರ್ಕದ ಮೋರಿ ದಾಟುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದು ಮಳೆ ನೀರಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನ ಪಕ್ಕದ ಮನೆಯ ಮಾಜಿ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಅವರು ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸುವಾಗಲೇ ಸುರೇಶ್ ಅವರು ಮೃತಪಟ್ಟಿದ್ದಾರೆ. ಮೃತ ಸುರೇಶ್ ಅವರ ಪತ್ನಿ ಬೀಡಿ ಕಟ್ಟುತ್ತಿದ್ದು, ಹಿರಿಯ ಮಗಳಿಗೆ ಇತ್ತೀಚೆಗಷ್ಟೆ ಮದುವೆ ಆಗಿತ್ತು. ಕಿರಿಯ ಮಗಳು ಅವಿವಾಹಿತಳಾಗಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ತಂದೆಯೇ ಅಕಾಲಿಕ ಮರಣವನ್ನಪ್ಪಿದ್ದು ಬಡ ಅಶಕ್ತ ಕುಟುಂಬಕ್ಕೆ ದಿಕ್ಕೇ ಕಾಣದಂತಾಗಿದೆ.