Home ಮಂಡ್ಯ ಕನ್ನಂಬಾಡಿ ಅಣೆಕಟ್ಟು ಸುತ್ತ ಕಲ್ಲು ಗಣಿಗಾರಿಕೆ ಸಂಪೂರ್ಣ ಸ್ಥಗಿತಕ್ಕೆ ತೀರ್ಮಾನ – ಸಚಿವ ಡಾ‌. ನಾರಾಯಣಗೌಡ.

ಕನ್ನಂಬಾಡಿ ಅಣೆಕಟ್ಟು ಸುತ್ತ ಕಲ್ಲು ಗಣಿಗಾರಿಕೆ ಸಂಪೂರ್ಣ ಸ್ಥಗಿತಕ್ಕೆ ತೀರ್ಮಾನ – ಸಚಿವ ಡಾ‌. ನಾರಾಯಣಗೌಡ.

93
0
Mandya district administration decides to completely stop stone mining around Kannambadi Dam Minister Narayana Gowda

ಮಂಡ್ಯ:

ಕೆಆರ್ ಎಸ್ ಡ್ಯಾಂ ಸುತ್ತ ಕಲ್ಲುಗಣಿಗಾರಿಕೆಯನ್ನೇ ನಿಲ್ಲಿಸಬೇಕು. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಡ್ಯಾಂ ಇರುವ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಮಾಡಲು ಅವಕಾಶವಿದೆ. ತಕ್ಷಣವೆ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯು ಚರ್ಚೆ ನಡೆಸುತ್ತೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು. ಅವರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲ್ಲು ಗಣಿಗಾರಿಕೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಕನ್ನಂಬಾಡಿ ಅಣೆಕಟ್ಟಿನ ವಿಚಾರ ಸದ್ಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಗಣಿ ಪ್ರದೇಶದಲ್ಲಿ ಬ್ಲಾಸ್ಟ್ ಮಾಡುವುದರಿಂದ ಡ್ಯಾಂ ಗೆ ಡ್ಯಾಮೇಜ್ ಆಗತ್ತೆ ಎಂಬ ಕೂಗು ಬಹಳದಿನಗಳಿಂದ ಇದೆ. ಹೀಗಾಗಿ ಡ್ಯಾಂ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಯನ್ನೇ ಸ್ಥಗಿತಮಾಡುವುದು ಉತ್ತಮ. ದೇಶದ ಬೇರೆ ಬೇರೆ ಅಣೆಕಟ್ಟು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಿಲ್ಲಿಸಿರುವ ಉದಾಹರಣೆ ಇದೆ. ಅದೇ ರೀತಿ ಮಂಡ್ಯ ಜಿಲ್ಲೆಯಲ್ಲೂ ಕ್ರಮ ತೆಗೆದುಕೊಳ್ಳುವುದು ಉತ್ತಮ. ಅಗತ್ಯವಿದ್ದಲ್ಲಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸುವವರಿಗೆ ಪರ್ಯಾಯ ಸ್ಥಳ ಗುರುತಿಸಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳೋಣ. ಅಲ್ಲದೆ ಬೇಬಿ ಬೆಟ್ಟದಲ್ಲಿ ಪ್ರವಾಸೋಧ್ಯಮಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಿ ಎಂದು ಸಚಿವರು ಹೇಳಿದರು.

ಅಧಿಕಾರಿಗಳಿಗೆ ಛಳಿ ಬಿಡಿಸಿದ ಸಚಿವರು

ಗಣಿಗಾರಿಕೆ ನಡೆಸುವ ಪ್ರದೇಶದಕ್ಕೆ ಅಧಿಕಾರಿಗಳು ಭೇಟಿ ಕೊಡುವುದೇ ಇಲ್ಲ‌. ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಕಲ್ಲು ತೆಗೆಯುತ್ತಿದ್ದಾರೆ ಎನ್ನುವ ಮಾಹಿತಿಯೆ ಇಲ್ಲ. ಕೆಲ ಅಧಿಕಾರಿಗಳ ಶಾಮೀಲಾತಿ ಹಾಗೂ ನಿರ್ಲಕ್ಷ್ಯದಿಂದಲೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕೆ.ಆರ್.ಎಸ್. ಡ್ಯಾಂ ಸುತ್ತ ಗಣಿಗಾರಿಕೆ ಇದೆ. ಅಲ್ಲಿ ಬ್ಲಾಸ್ಟ್ ಮಾಡಿದಾಗ ಸುತ್ತಲ ಪ್ರದೇಶದ ಜನರಿಗೆ ಗೊತ್ತಾಗುತ್ತೆ. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಇದು ಬೇಲಿಯೆ ಎದ್ದು ಹೊಲ ಮೇಯ್ದ ರೀತಿಯಂತಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನುಮುಂದೆ ಕಡ್ಡಾಯವಾಗಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಬೇಕು. ಸರಿಯಾಗಿ ರಾಜಧನ ಸಂಗ್ರಹ ಮಾಡಬೇಕು ಎಂದು ಸೂಚಿಸಿದರು. ನಮ್ಮ ಜಿಲ್ಲೆಯಲ್ಲಿ 95 ಕ್ಕು ಹೆಚ್ಚು ಕಲ್ಲುಗಣಿಗಾರಿಕೆ ಇದೆ. ಬೇರೆ ಜಿಲ್ಲೆಗಳಲ್ಲಿ ಇದಕ್ಕಿಂತ ಕಡಿಮೆ ಇದೆ. ಅಲ್ಲಿ ಸಾವಿರಾರು ಕೋಟಿ ರಾಜಧನ ಸಂಗ್ರಹವಾಗುತ್ತಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಸರಿಯಾಗಿ ರಾಯಲ್ಟಿ ಸಂಗ್ರಹವಾಗುತ್ತಿಲ್ಲ. ಅಧಿಕಾರಿಗಳು ತಕ್ಷಣ ಎಲ್ಲ ಲೊಪ ದೋಷ ಸರಿಪಡಿಸಬೇಕು ಎಂದು ಖಡಕ್ ಎಚ್ವರಿಕೆ ನೀಡಿದರು.

Mandya district administration decides to completely stop stone mining around Kannambadi Dam Minister Narayana Gowda

ಅಕ್ರಮ ತಡೆಗೆ ಸಹಾಯವಾಣಿ ಆರಂಭ

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಬೇಕು. ಅದಕ್ಕಾಗಿ ಅಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡಬೇಕು. ಜೊತೆಗೆ ಜನಸಾಮಾನ್ಯರ ನೆರವನ್ನೂ ಪಡೆಯಬೇಕು. ಜಿಲ್ಲೆಯಲ್ಲಿ ಎಲ್ಲೇ ಅಕ್ರಮವಾಗಿ ಗಣಿಗಾರಿಕೆ ನಡೆದರೆ, ಬ್ಲಾಸ್ಟ್ ಮಾಡಿದರೆ ತಕ್ಷಣ ಆ ಪ್ರದೇಶದ ಜನಸಾಮಾನ್ಯರಿಗೆ ತಿಳಿಯುತ್ತದೆ. ಸಹಾಯವಾಣಿ ತೆರೆಯುವುದರಿಂದ ಜನರು ಆ ಕ್ಷಣವೇ ಮಾಹಿತಿ ನೀಡುತ್ತಾರೆ. ಇದರಿಂದ ಅಕ್ರಮ ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಹಾಯವಾಣಿ ಕೇಂದ್ರ ತೆರೆದು ಜನಸಾಮಾನ್ಯರಿಗೆ ಆ ಬಗ್ಗೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಗೆ ಟಾಸ್ಕ್ ಪೋರ್ಸ್ ರಚನೆಯಾಗಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲಿಸ್ ಇಲಾಖೆ, ಆರ್ ಟಿ ಓ, ಕಂದಾಯ, ಪಂಚಾಯತರಾಜ್ ಇಲಾಖೆ ಹಾಗೂ ಅರಣ್ಯ ಇಲಾಖೆ ಒಳಗೊಂಡ ಟಾಸ್ಕ್ ಪೋರ್ಸ್ ರಚನೆಯಾಗಬೇಕು‌. ತಕ್ಷಣವೆ ಸರ್ವೆ ನಡೆಸಿ, ವರದಿ ನೀಡಬೇಕು. ಎಲ್ಲ ಕಡೆ ತಪಾಸಣಾ ಕೇಂದ್ರ ಮಾಡಬೇಕು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಪಟ್ಟಿಯನ್ನು ತಕ್ಷಣ ನೀಡಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾದ ಕೋಟಿ ಕೋಟಿ ರೂಪಾಯಿ ಆದಾಯ ನಷ್ಟವಾಗುತ್ತಿದೆ. ತಪಾಸಣಾ ಕೇಂದ್ರದಲ್ಲಿ ಸಿಸಿಕ್ಯಾಮರಾ ಅಳವಡಿಕೆ ಆಗಬೇಕು. ಕಲ್ಲು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಈ ಬಗ್ಗೆ ಅಧಿಕಾರಿಗಳು ಪ್ರತಿದಿನ ನಿಗಾ ಇಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌. ಅಶ್ವಥಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಶ್ವಿನಿ, ಸಿಇಯೋ ದಿವ್ಯ ಪ್ರಭು, ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಪದ್ಮಜಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here