Home ಮಂಡ್ಯ ಕೋವಿಡ್ ನಿಯಂತ್ರಣದಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಗೆ ಮೊದಲಸ್ಥಾನ: ಡಾ.ಸಿ.ಎನ್ ಅಶ್ವಥ್ ನಾರಾಯಣ

ಕೋವಿಡ್ ನಿಯಂತ್ರಣದಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಗೆ ಮೊದಲಸ್ಥಾನ: ಡಾ.ಸಿ.ಎನ್ ಅಶ್ವಥ್ ನಾರಾಯಣ

69
0

ಮಂಡ್ಯ:

ರಾಜ್ಯದಲ್ಲಿಯೇ ಕೋವಿಡ್ ಸೋಂಕನ್ನು ಉತ್ತಮವಾಗಿ ನಿರ್ವಹಣೆ ಮಾಡುವಲ್ಲಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ &ಬಿಟಿ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣರವರು ಹೇಳಿದರು.

ಪಾಂಡವಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೊಂಬಾಳೆ ಗ್ರೂಪ್ ನ ಸಿ.ಎಸ್.ಆರ್ ಯೋಜನೆಯಡಿ ನೂತನವಾಗಿ ಸ್ಥಾಪಿಸಿರುವ ಆಮ್ಲಜನಕದ ಉತ್ಪಾದನ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವೇ ನಲುಗುತ್ತಿರುವಾಗ ಬಹಳ ಧೈರ್ಯದಿಂದ ಜಿಲ್ಲೆಯಲ್ಲಿ ಕೋವಿಡ್ ಹತೋಟಿಗೆ ತರುವಲ್ಲಿ ಜಿಲ್ಲೆಯ ಸಚಿವರು,‌ಎಲ್ಲಾ ಶಾಸಕರು ಹಾಗೂ ಜಿಲ್ಲಾಡಳಿತದ ಶ್ರಮವನ್ನು ಶ್ಲಾಘಿಸಿದರು.

ಆಕ್ಸಿಜನ್ ಉತ್ಪಾದನ ಘಟಕಗಳ‌ ಜೊತೆಗೆ ಜನರೇಟರ್ ಪ್ಲಾಂಟ್‌ಗಳು ಹಾಗೂ ಇತರೆ ಅವಶ್ಯಕವಿರುವ ಎಲ್ಲಾ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದ್ದು, ಇದೊಂದು ಉತ್ತಮ ಪ್ಲಾಂಟ್ ಎಂದರು.

ಮಂಡ್ಯ ಜಿಲ್ಲೆಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಹಾಗೂ ಕೋವಿಡ್ ಮೂರನೇ ಅಲೆ ತಡೆಗಟ್ಟುವಲ್ಲಿ ಲಸಿಕಾಕರಣವನ್ನು ಯಶಸ್ವಿಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ನಂತರ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ.ಸಿ ನಾರಾಯಣಗೌರವರು ಮಾತನಾಡಿ, ಎರಡನೇ ಅಲೆಯಲ್ಲಿ ಆಕ್ಸಿಜನ್ ಪೂರೈಸುವಲ್ಲಿ ಬಹಳ ಕಷ್ಟವಾಗಿತ್ತು. ಆದರೆ ಆ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಆಕ್ಸಿಜನ್ ಉತ್ಪಾದನ ಘಟಕ ನಿರ್ಮಾಣದಲ್ಲಿ ಪಟ್ಟ ಪ್ರಯತ್ನ ಇಂದು ಕೈಗೂಡಿದೆ ಎಂದರು.

ರಾಜ್ಯದಲ್ಲಿಯೇ ಮೊದಲಬಾರಿಗೆ ಮಂಡ್ಯ‌ ಜಿಲ್ಲೆಯ ಪಾಂಡವಪುರ ಹಾಗೂ ಕೆ.ಆರ್ ಪೇಟೆ ತಾಲ್ಲೂಕು, ನಂತರ ಮಳವಳ್ಳಿಗಳಲ್ಲಿ ನಂತರದಲ್ಲಿ ಮಂಡ್ಯ ತಾಲ್ಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಮುಂದುವರೆದಂತೆ ಸಿ.ಎಸ್.ಆರ್ ನಿಧಿಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್ ಸ್ಥಾಪನಾ ಕಾರ್ಯ ನಡೆಯುತ್ತಿದೆ ಎಂದರು.

ನಂತರ ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಸರ್ಕಾರಿ ಐಟಿಐ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರ ಶಾಸಕ ಸಿ ಎಸ್ ಪುಟ್ಟರಾಜು, ವಿಧಾನಪರಿಷತ್ ಶಾಸಕ ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ , ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here