Mangalore: Boat sinks — 9 fishermen rescued
ಮಂಗಳೂರು:
ಉಪ್ಪುಂದ ತಾರಾಪತಿಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ಈ ವೇಳೆ ಸ್ಥಳೀಯ ಮೀನುಗಾರರು ನೆರವಿಗೆ ಧಾವಿಸಿ 9 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಉಪ್ಪುಂದ ತಾರಾಪತಿಯಿಂದ ಬೆಳಿಗ್ಗೆ 7:30ರ ಸುಮಾರಿಗೆ ದೋಣಿ ತೆರಳಿತ್ತು. ತೀರ ಪ್ರದೇಶದಿಂದ 5 ನಾಟಿಕಲ್ ಮೈಲುಗಳ ದೂರಕ್ಕೆ ಹೋದಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಪಲ್ಟಿಯಾಗಿದ್ದು, ಇದರಲ್ಲಿ 9 ಮಂದಿ ಮೀನುಗಾರರು ಇದ್ದರು. ಆದರೆ, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ದೋಣಿಯಲ್ಲಿದ್ದ ಮೀನುಗಾರರೊಬ್ಬರು ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿ ಬಲೆಗಳ ನಡುವೆ ಸಿಕ್ಕಿ ಬಿದ್ದಿರುವುದನ್ನು ಗಮನಿಸಿದ ಮತ್ತೊಂದು ದೋಣಿಯ ಮೀನುಗಾರ ಇತರರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ 6 ದೋಣಿಗಳಲ್ಲಿ ಸ್ಥಳಕ್ಕೆ ಬಂದ ಇತರೇ ಮೀನುಗಾರರು ಒಂದು ಗಂಟೆ ಕಾಲ ನೀರಿನಲ್ಲೇ ಇದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮರವಂತೆ ಬಂದರಿಗೆ ಕರೆತಂದಿದ್ದಾರೆ, ದೋಣಿಯಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡಿ ಅದನ್ನೂ ದಡಕ್ಕೆ ಎಳೆತಂದಿದ್ದಾರೆ. ಕೊಚ್ಚಿಕೊಂಡು ಹೋಗುತ್ತಿದ್ದ ದೋಣಿಯನ್ನು ಹಗ್ಗಗಳಿಂದ ಎಳೆದು ಸುರಕ್ಷಿತವಾಗಿ ಮರವಂತೆ ಮೀನುಗಾರಿಕಾ ಬಂದರಿಗೆ ತಂದರು ಎಂದು ಮೂಲಗಳು ತಿಳಿಸಿವೆ.
