ಬೆಂಗಳೂರು:
ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಮಂಡಳಿ ಘೊಷಣೆ ಮಾಡಿ ಎರಡು ವಾರಗಳು ಕಳೆದರೂ ಅಧಿಕೃತ ಆದೇಶ ಹೊರಡಿಸಿಲ್ಲ.
ನವೆಂಬರ್ 13 ರಂದು ರಾಜ್ಯದಲ್ಲಿ ಮರಾಠಾ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಅದಕ್ಕೆ 50 ಕೋಟಿ ರೂಪಾಯಿಯನ್ನು ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿದ್ದರು.
ಮುಖ್ಯಮಂತ್ರಿಯ ಟಿಪ್ಪಣಿ ಹೊರ ಬರುತ್ತಿರುವಂತೆ ರಾಜ್ಯದಲ್ಲಿ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದವು. ಅಲ್ಲದೇ ಡಿಸೆಂಬರ್ 5 ರಂದು ರಾಜ್ಯ ಬಂದ್‍ಗೆ ಕರೆ ನೀಡಿವೆ. ಈ ನಡುವೆ ರಾಜ್ಯ ಸರ್ಕಾರ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ಬದಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲು ನಿರ್ಧರಿಸಿದೆ.
ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕನ್ನಡ ಸಂಘಟನೆಗಳ ಪ್ರತಿಭಟನೆಗೆ ಸರ್ಕಾರ ಜಗ್ಗುವುದಿಲ್ಲ. ಘೋಷಣೆ ಮಾಡಿರುವ ಮರಾಠ ಅಭಿವೃದ್ದಿ ಮಂಡಳಿ ಸ್ಥಾಪನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಅಲ್ಲದೇ ಬಲವಂತದ ಬಂದ್ ಮಾಡಿದರೆ ಉಗ್ರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದುವರೆಗೂ ಮರಾಠ ಅಭಿವೃದ್ಧಿನಿಗಮ ರಚನೆ ಮಾಡಿರುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಸರ್ಕಾರ ಕನ್ನಡಪರ ಸಂಘಟನೆಗಳ ಬಂದ್‍ಗೆ ದೊರೆಯುವ ಪ್ರತಿಕ್ರಿಯೆ ನೋಡಿ ಅಧಿಕೃತ ಅದೇಶ ಹೊರಡಿಸುವ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.