
ಬೆಂಗಳೂರು: ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠ ಮತ್ತು ‘ಜಗನ್ನಾಥ ಬಳಗ’ದ ಆಶ್ರಯದಲ್ಲಿ ಆರಂಭವಾದ ‘ಮಾಸದ ಮಾಧುರ್ಯ’ ಕಾರ್ಯಕ್ರಮವು ತನ್ನ 100ನೇ ತಿಂಗಳ ಸಂಭ್ರಮಾಚರಣೆಯನ್ನು ಗುರುವಾರ ಸಂಜೆ ಮಲ್ಲೇಶ್ವರದ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ವೈಭವದಿಂದ ಆಚರಿಸಲಾಯಿತು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಮಾತನಾಡಿ, ಜಗನ್ನಾಥ ಭವನವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿಸಲು ಈ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ ಎಂದರು. ಗಣೇಶ್ ಯಾಜಿ ಮತ್ತು ದತ್ತಗುರು ಹೆಗ್ಡೆ ಅವರ ಬೆಂಬಲವನ್ನು ಮೆಚ್ಚಿ, 100 ತಿಂಗಳು ನಿರಂತರವಾಗಿ ಕಾರ್ಯಕ್ರಮ ನಡೆಸಿದುದು ವ್ರತದಂತೆ ಶ್ಲಾಘನೀಯ ಎಂದರು.

ಅವರು ಜಗನ್ನಾಥ ಭವನದ ಸ್ಥಳವು ಆಧ್ಯಾತ್ಮಿಕ ಶಕ್ತಿ ಹೊಂದಿದ ಪ್ರದೇಶವಾಗಿದ್ದು, ಸುತ್ತಮುತ್ತ ಜನರನ್ನು ಒಟ್ಟುಗೂಡಿಸುವ ವಾತಾವರಣವಿದೆ ಎಂದು ಹೇಳಿದರು. “ಮಾಸದ ಮಾಧುರ್ಯ ಜನರಲ್ಲಿ ಉತ್ತಮ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿದೆ,” ಎಂದು ಸಂತೋಷ ಅಭಿಪ್ರಾಯಪಟ್ಟರು. ಜಾತ್ರೆಗಳ ಸಂದರ್ಭದಲ್ಲಿ ಭವನದ ಬಾಗಿಲು ಸದಾ ತೆರೆದಿರುತ್ತದೆ ಎಂದು ತಿಳಿಸಿ, ಇತರೆ ರಾಜ್ಯಗಳ ಕಚೇರಿಗಳಿಗಿಂತ ಸಣ್ಣದಾದರೂ, ಇಲ್ಲಿನ ಕಲಾ ಮತ್ತು ಸಂಸ್ಕೃತಿಕ ಚಟುವಟಿಕೆಗಳೇ ಭವನವನ್ನು ಆತ್ಮೀಯ ವಾತಾವರಣದಿಂದ ತುಂಬಿವೆ ಎಂದು ವಿಶ್ಲೇಷಿಸಿದರು.

ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೃತ್ಯ ಮತ್ತು ಸಂಗೀತಕ್ಕೆ ಒತ್ತು ಕೊಟ್ಟಿರುವುದು ಹಿಂದೂ ಸಂಸ್ಕೃತಿಯ ವಿಶಿಷ್ಟ ಅಂಶ ಎಂದು ಹೇಳಿದರು. “ನಮ್ಮ ದೇವತೆಗಳಿಗೂ ನೃತ್ಯ ಮತ್ತು ಸಂಗೀತದ ಮೋಹವಿತ್ತು. ಅದಕ್ಕಾಗಿ ದೇವರ ಆರಾಧನೆಗಳಲ್ಲಿ ಸಂಗೀತವನ್ನು ಜೋಡಿಸಲಾಗಿದೆ. ಭಾರತೀಯ ಸಂಗೀತ ಮನಸ್ಸುಗಳನ್ನು ಅರಳಿಸುವ ಶಕ್ತಿ ಹೊಂದಿದೆ,” ಎಂದು ಕಟೀಲ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷೆ ಮಾಲವಿಕಾ ಅವಿನಾಶ್, ರಾಜ್ಯ ಖಜಾಂಚಿ ಸುಬ್ಬನರಸಿಂಹ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಕಾರ್ಯಕ್ರಮ ಸಂಚಾಲಕ ದತ್ತಗುರು ಹೆಗ್ಡೆ, ರಾಜ್ಯ ಸಾಂಸ್ಕೃತಿಕ ಸಂಚಾಲಕಿ ರೂಪ ಅಯ್ಯರ್, ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.