
Mask is mandatory for those above 60 years; No restriction in public places in Karnataka: Health Minister Dinesh Gundu Rao
ಬೆಂಗಳೂರು:
ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ 60 ವರ್ಷದ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕುಶಾಲ್ ನಗರದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ವಿಚಾರವಾಗಿ ಇಲಾಖೆಯಿಂದ ಇಂದು ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ರೂಪಾಂತರಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ನಾನು ಒಂದು ಸುತ್ತಿನ ಸಭೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ್ದೇನೆ. ಅಲ್ಲದೇ ಡಾ. ರವಿ ಅವರ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ಕೂಡಾ ನಿನ್ನಯೇ ಸಭೆ ನಡೆಸಿ ಕೆಲವು ಸಲಹೆಗಳನ್ನ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿದವರು, ಉಸಿರಾಟದ ಸಮಸ್ಯೆ ಇರುವವರಿಗೆ ಮಾಸ್ಕ್ ಕಡ್ಡಾಯಗೊಳಿಸುವಂತೆ ಸಮಿತಿಯವರು ಸಲಹೆ ನೀಡಿದ್ದಾರೆ. ಸಮಿತಿಯ ಸಲಹೆಗಳನ್ನ ಆಧರಿಸಿ ಆರೋಗ್ಯ ಇಲಾಖೆಯಿಂದ ಇಂದು ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಸನ್ನದ್ದ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.
ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.