ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-44ರ ಅತ್ತಿಬೆಲೆ–ಅನೇಕಲ್ ಭಾಗದಲ್ಲಿ ಅಕಸ್ಮಿಕವಾಗಿ ಸಂಭವಿಸಿದ ರಸ್ತೆ ಕುಸಿತದಿಂದ ಬೆಂಗಳೂರು–ಹೊಸೂರು ಹೆದ್ದಾರಿಯಲ್ಲಿ ಭಾರೀ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಈ ಪ್ರದೇಶದಲ್ಲಿ ಕಳೆದ ಹಲವು ತಿಂಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪ್ರದೇಶದ ಒಂದು ಬದಿಯಲ್ಲಿ ಹೆದ್ದಾರಿ ಕುಸಿದಿದೆ.
ಕುಸಿತದ ಪರಿಣಾಮವಾಗಿ ಚಂದಾಪುರದಿಂದ ಅತ್ತಿಬೆಲೆವರೆಗೆ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ನಾಲ್ಕು ರಿಂದ ಐದು ಗಂಟೆಗಳವರೆಗೆ ಟ್ರಾಫಿಕ್ನಲ್ಲಿ ಸಿಲುಕಿದ್ದಾರೆ. ಶಾಲಾ ಬಸ್ಗಳು, ಆಂಬ್ಯುಲೆನ್ಸ್ಗಳು ಹಾಗೂ ಕಚೇರಿ ವಾಹನಗಳಿಗೂ ತೀವ್ರ ತೊಂದರೆ ಎದುರಾಗಿದೆ.
ಅದೃಷ್ಟವಶಾತ್, ಕಾಮಗಾರಿ ಸ್ಥಳದಲ್ಲಿ ಮುನ್ನೆಚ್ಚರಿಕಾ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ವರದಿ ಇಲ್ಲ. ಆದರೆ ಸಾಮಾನ್ಯ ದಿನಗಳಲ್ಲೇ ಹೆಚ್ಚು ದಟ್ಟಣೆಯಿರುವ ಈ ಮಾರ್ಗದಲ್ಲಿ ಕುಸಿತ ಸಂಭವಿಸಿದ ಕಾರಣ ಸಂಚಾರ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.
NH-44 caves in near Attibele, crippling Bengaluru–Hosur traffic.
— Deepak Bopanna (@dpkBopanna) February 4, 2026
Road widening works being carried out on the stretch suspected to be the reason for the collapse. NHAI has begun repair work. pic.twitter.com/c1fGXJUFwb
ಸಂಚಾರಿ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ಅತ್ತಿಬೆಲೆ ಭಾಗದಿಂದ ಡೈವರ್ಷನ್ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸೂರು ರಸ್ತೆ ಮಾರ್ಗವನ್ನು ಸಾಧ್ಯವಾದಷ್ಟು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಕುಸಿದ ಭಾಗದ ದುರಸ್ತಿ ಹಾಗೂ ಸಂಚಾರ ಸುಧಾರಣೆಗಾಗಿ ತುರ್ತು ಕ್ರಮಗಳು ಕೈಗೊಳ್ಳಲಾಗುತ್ತಿದ್ದು, ಪರಿಸ್ಥಿತಿ ಸಹಜಗೊಳ್ಳುವವರೆಗೆ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
