
ಬೆಂಗಳೂರು: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನವರಂಗ ಸರ್ಕಲ್ ಬಳಿ ಬೃಹದಾಕಾರದ ಮರ ಬುಡಸಮೇತವಾಗಿ ಧರೆಗುರುಳಿದ ಘಟನೆ ಮಧ್ಯರಾತ್ರಿ ನಡೆದಿದೆ.
ಸುಮಾರು ರಾತ್ರಿ 2 ಗಂಟೆ ಸಮಯದಲ್ಲಿ, ರಸ್ತೆಯ ಬದಿಯಲ್ಲಿದ್ದ ದೊಡ್ಡ ಮರವು ಅಕಸ್ಮಾತ್ತಾಗಿ ಉರುಳಿ ರಸ್ತೆಯ ಎರಡೂ ಬದಿಯವರೆಗೆ ಚಾಚಿಕೊಂಡಿದೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಎರಡು ಕಾರುಗಳು ಮತ್ತು ಮೂರು ಬೈಕ್ಗಳು ಹಾನಿಗೊಂಡಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಸ್ಥಳಕ್ಕೆ ಮಲೆಶ್ವರಂ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಬಿಎಂಪಿ ತುರ್ತು ತಂಡಗಳು ಕ್ರೇನ್ ಹಾಗೂ ಕತ್ತರಿಸುವ ಯಂತ್ರಗಳ ಸಹಾಯದಿಂದ ಮರ ತೆರವು ಕಾರ್ಯ ಆರಂಭಿಸಿವೆ. ಮರ ಧರೆಗುರುಳಿದ ಪರಿಣಾಮ ರಸ್ತೆಯ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು.
ಸ್ಥಳೀಯ ನಿವಾಸಿಗಳು, ಮರವು ಕಳೆದ ಕೆಲವು ವಾರಗಳಿಂದ ಒಣಗಿ ದುರ್ಬಲ ಸ್ಥಿತಿಯಲ್ಲಿತ್ತು ಎಂದು ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ಗಮನ ಹರಿಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಅವರು, ಮಳೆಗಾಲದಲ್ಲಿ ಇಂತಹ ಮರಗಳು ಅಪಾಯದ ಕಾರಣವಾಗುತ್ತಿದ್ದು, ನಗರಾದ್ಯಂತ ಹಳೆಯ ಮರಗಳ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.


“ರಾತ್ರಿ ಎರಡು ಗಂಟೆ ಸುಮಾರಿಗೆ ಭಾರೀ ಶಬ್ದ ಕೇಳಿ ಹೊರಗೆ ಬಂದಾಗ, ಮರವು ರಸ್ತೆ ಮಧ್ಯೆ ಬಿದ್ದಿತ್ತು. ಓಮಿನಿ ಕಾರಿನ ಮೇಲೂ ಬಿದ್ದು, ಪಕ್ಕದ ಬೈಕ್ಗಳು ಹಾನಿಗೊಂಡಿದ್ದವು. ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿತು,” ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ನಗರದ ಮಲೆಶ್ವರಂ, ರಾಜಾಜಿನಗರ, ನವರಂಗ ಸರ್ಕಲ್ ಸೇರಿದಂತೆ ಹಲವೆಡೆ ಹಳೆಯ ಮರಗಳ ಪರಿಶೀಲನೆ ತಕ್ಷಣ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.