ಬೆಂಗಳೂರು:
ಬೆಂಗಳೂರಿನ ಎಲ್ಲಾ ಪ್ರದೇಶಗಳ ಸಮಾನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೆಕೊಳಲಿನಲ್ಲಿ 250 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ,
ವರ್ತೂರು ವಾರ್ಡಿನಲ್ಲಿ ಕೆ.ಆರ್.ಡಿ.ಸಿ. ಎಲ್ ವತಿಯಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, 150 ಅಡಿಗಳ ಸಿಡಿಪಿ ರಸ್ತೆ ಕಾಮಗಾರಿ, ಮಾರತ್ತಹಳ್ಳಿಯಲ್ಲಿ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬೆಂಗಳೂರು ಯೋಜನಾಬದ್ಧವಾಗಿ ಬೆಳೆದಾಗ ಮಾತ್ರ ಜನರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಮೂಲ ಬೆಂಗಳೂರು, 7 ಸಿಎಂಸಿ ಕ್ಷೇತ್ರ, 110 ಹಳ್ಳಿಗಳನ್ನು ಪರಸ್ಪರ ಲಿಂಕೇಜ್ ಮಾಡಿ ಸಮನ್ವಯದಿಂದ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕಿದೆ. ಉತ್ತಮ ರಸ್ತೆ, ಯುಜಿಡಿ, ವಿದ್ಯುತ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಸಮಾನಾಗಿ ಬೆಂಗಳೂರಿನ ಎಲ್ಲ ಸ್ಥಳಗಳಿಗೆ ದೊರಕಿಸಿಕೊಡುವ ಮಹಾತ್ವಾಕಾಂಕ್ಷೆಯಿಂದ ಮಾಸ್ಟರ್ ಪ್ಲಾನ್‍ನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಮಹದೇವಪುರ ಬೆಂಗಳೂರಿನ ಅತ್ಯುತ್ತಮ ಪ್ರದೇಶವಾಗಲಿದೆ : ದೊಡ್ಡ ಪ್ರಮಾಣದಲ್ಲಿ ಮಹಾದೇವಪುರ ಬೆಳೆಯುತ್ತಿದ್ದು, ಇಲ್ಲಿನ ಮೂಲಭೂತಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಸಾಫ್ಟ್‍ವೇರ್‍ನಿಂದ ಹಿಡಿದು ಎಲ್ಲ ವಲಯಗಳ ಉದ್ಯಮಗಳು, ವಸತಿ ಸಮುಚ್ಛಯಗಳು ಈ ಪ್ರದೇಶದಲ್ಲಿದೆ. ಕಾವೇರಿ 4 ನೇ ಹಂತದ ಕಾಮಗಾರಿ,ಯುಜಿಡಿ ಕಾಮಗಾರಿ ಸೇರಿದಂತೆ ಜನೋಪಯೋಗಿ ಕೆಲಸಗಳು ಈ ಕ್ಷೇತ್ರದಲ್ಲಿ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಹದೇವಪುರ ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರದೇಶವಾಗಲಿದೆ ಎಂಬ ಭರವಸೆ ಇರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈಶಾನ್ಯ ಭಾಗದ ಬೆಂಗಳೂರಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮನ್ವಂತರ ಯುಗ. ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆಗಳ ಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಾರಂಭಿಸಲಾಗಿದೆ. ಎಲಿವೇಟೆಡ್ ರಸ್ತೆ ಸಂಪೂರ್ಣವಾಗಿ ವರ್ತೂರು ರಸ್ತೆಗೆ ಸೇರಿಸುವ ಚಿಂತನೆಯಿತ್ತು. ವಾಹನ ದಟ್ಟಣೆಯನ್ನು ನಿವಾರಿಸಲು 150 ಅಡಿಗಳ ಸಿ.ಡಿ.ಪಿ.ರಸ್ತೆ ಕಾಮಗಾರಿ ಬಹಳ ಮುಖ್ಯವಾಗಿದ್ದು, ಯೋಜನೆಗೆ ಚಾಲನೆ ನೀಡಲಾಗಿದೆ. ಇಂದು ಚಾಲನೆಗೊಂಡಿರುವ ಎರಡೂ ಕಾಮಗಾರಿಗಳು ಈ ಭಾಗದ ಜನರಿಗೆ ಸೇವೆ ಸಲ್ಲಿಸುವ ದೂರದೃಷ್ಟಿಯ ಯೋಜನೆಯಾಗಿದೆ ಎಂದರು.
ನೂತನ ಪೋಲಿಸ್ ಠಾಣೆಯ ಕಟ್ಟಡದ ಗುದ್ದಲಿ ಪೂಜೆ ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
— CM of Karnataka (@CMofKarnataka) February 24, 2022
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ @ArvindLBJP, ಆರೋಗ್ಯ ಸಚಿವರಾದ @mla_sudhakar, ಲೋಕಸಭಾ ಸಂಸದರಾದ ಶ್ರೀ @PCMohanMP, ವಿಧಾನಪರಿಷತ್ ಸದಸ್ಯರಾದ ಶ್ರೀ ಗೋಪಿನಾಥ್ ರೆಡ್ಡಿ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
2/2 pic.twitter.com/EaOcENhFhh
ನಗರೋತ್ಥಾನ ಯೋಜನೆ: ನಗರೋತ್ಥಾನ ಯೋಜನೆಯಡಿಯಲ್ಲಿ ಬೆಂಗಳೂರಿಗೆ 6 ಸಾವಿರ ಕೋಟಿ ಒದಗಿಸಲಾಗಿದೆ. 1500 ಕೋಟಿ ರೂ. ರಾಜಕಾಲುವೆ ವ್ಯವಸ್ಥೆಯ ಸುಧಾರಣೆಗಾಗಿ ಯೋಜನೆ ರೂಪಿಸಲಾಗಿದೆ. ಕಲುಷಿತ ನೀರನ್ನು ಸಂಸ್ಕರಿಸುವ 20ಕ್ಕೂ ಹೆಚ್ಚು ಎಸ್‍ಟಿಪಿ ಪ್ಲಾಂಟ್ಗಳು ಸಮರ್ಪಕವಾಗಿ ಕೆಲಸ ಆಗಬೇಕಿದೆ. ಕಲುಷಿತ ನೀರನ್ನು ಸಂಸ್ಕರಿಸಿಯೇ ಕಾಲುವೆಗಳಿಗೆ ಬಿಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನ 12 ಕಾರಿಡಾರ್‍ಗಳಲ್ಲಿ ಸಿಗ್ನಲ್‍ರಹಿತ ರಸ್ತೆ ನಿರ್ಮಾಣ, ನಗರ ಆರೋಗ್ಯ ಸೌಕರ್ಯ ವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ವಿಭಾಗವನ್ನು ಒಳಗೊಂಡಿರುವ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಜನಸಂದಣಿ ಇರುವ ಈ ಪ್ರದೇಶದಲ್ಲಿ ಸುವ್ಯವಸ್ಥಿತವಾದ ಪೊಲೀಸ್ ಠಾಣೆಯ ಅವಶ್ಯಕತೆಯನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಜ್ಞಾನದ ಕೇಂದ್ರ : ಭಾರತ ಅಂದರೆ ಬೆಂಗಳೂರು ಎಂದು ಕೇಳುಷ್ಟರ ಮಟ್ಟಿಗೆ ಬೆಂಗಳೂರು ಖ್ಯಾತಿಯಾಗಿದೆ. ನವ ಉದ್ಯಮಗಳು, ವಿಶೇಷವಾಗಿ ಐ.ಟಿ ಬಿಟಿ, ಮತ್ತು ಆರ್ ಅಂಡ್ ಡಿ ಕೇಂದ್ರಗಳು ಇದಕ್ಕೆ ಕಾರಣ. 21 ನೇ ಶತಮಾನ ಜ್ಞಾನದ ಶತಮಾನ. ಎಲ್ಲಿ ಜ್ಞಾನ ಇದೆ ಅಲ್ಲಿ ಇಂದು ಶಕ್ತಿ ಇದೆ. ಭೂಮಿ ಇದ್ದವರು ಜಗತ್ತನ್ನು ಆಳುವ ಕಾಲ ಹೋಗಿ ಬೆಂಗಳೂರು ಇಂದು ಜ್ಞಾನದ ಕೇಂದ್ರವಾಗಿದೆ. 180 ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳು ಇಲ್ಲಿವೆ. ಬೇರೆ ಯಾವ ನಗರದಲ್ಲಿಯೂ ಇಷ್ಟು ಪ್ರಮಾಣದ ಆರ್ ಅಂಡ್ ಡಿ ಕೇಂದ್ರಗಳಿಲ್ಲ. ಎಲ್ಲಾ ರಂಗಗಳಲ್ಲಿಯೂ ಆರ್ ಅಂಡ್ ಡಿ ಕೇಂದ್ರಗಳಿದ್ದು, ಅದೇ ನಮ್ಮ ಶಕ್ತಿ. ಇದರ ಗೌರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರವನ್ನು ಕಟ್ಟಬೇಕಿದೆ. ಬೆಂಗಳೂರಿನ ಬೆಳವಣಿಗೆಯ ದೃಷ್ಟಿಯಿಂದ ಅತಿ ಹೆಚ್ಚು ಐಟಿ ಸಂಸ್ಥಗಳಿರುವ ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ನಾವು ಹೆಚ್ಚಿನ ಮಹತ್ವ ನೀಡಬೇಕಿದೆ. ಬೆಂಗಳೂರಿನ ಹಿತದೃಷ್ಟಿಯಿಂದ ಯೋಜನಾಬದ್ಧವಾದ ಬೆಳವಣಿಗೆಯಾದರೆ, ಎಲ್ಲಾ ಪ್ರದೇಶಗಳೂ ಸರಿಸಮಾನವಾಗಿ ಬೆಳೆಯುತ್ತವೆ. ಸಾಮಾನ್ಯಜನರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದರು.
ನವ ಬೆಂಗಳೂರಿನಿಂದ ನವ ಕರ್ನಾಟಕ- ನವ ಕರ್ನಾಟಕದಿಂದ ನವ ಭಾರತ: ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾವೇರಿ 4 ನೇ ಹಂತ ಮುಕ್ತಾಯದ ಹಂತದಲ್ಲಿದೆ. ನಿಗದಿತ ಸಮಯದಲ್ಲಿ ಪೂರ್ನಗೊಳಿಸಲು ಸೂಚಿಸಲಾಗಿದೆ. ಯುಜಿಡಿ ಲೈನ್‍ನ್ನು ಜೊತೆ ಜೊತೆಗೇ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಬೆಂಗಳೂರಿನ ಮೆಟ್ರೋ ವಿಸ್ತರಣೆಗೆ 2ನೇ ಹಂತದ ಕಾಮಗಾರಿಯನ್ನು 2024 ರೊಳಗೆ ಮುಗಿಸಲು ಸೂಚಿಸಿದ್ದು, ಮುಂದಿನ ಹಂತಕ್ಕೂ ಈಗಲೇ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ. ಹೆಬ್ಬಾಳದಿಂದ ರಿಂಗ್ ರೋಡ್ ನಿಂದ ಮಹದೇವಪುರದವರೆಗೆ ಫ್ಲೈಓವರ್ ಹಾಗೂ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು. ಗುರಗುಂಟೆಪಾಳ್ಯ ಜಂಕ್ಷನ್‍ನ್ನು ಕೂಡ ಸುಗಮಗೊಳಿಸಿ ಎತ್ತರಿಸಿದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಸಮಸ್ಯೆಗಳಿಗೀಡಾದ ಹಲವಾರು ಯೋಜನೆಗಳಿಗೆ ಮುಕ್ತಿ ಕೊಟ್ಟು ಕಾಮಗಾರಿಗಳನ್ನು ನಮ್ಮ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ಖ್ಯಾತಿಯನ್ನು ಉಳಿಸಿ ಬೆಳೆಸಲು ಅಗತ್ಯವಿರುವ ಎಲ್ಲಾ ಕಾರ್ಯವನ್ನೂ ಮಾಡಲಾಗುವುದು. ಬೆಂಗಳೂರನ್ನು ನಾವು ಸಿಂಗಪೂರ ಮಾಡಬೇಕಿಲ್ಲ. ಬೆಂಗಳೂರಿಗೆ ಬೆಂಗಳೂರೇ ಮಾದರಿ. ಇಲ್ಲಿನ ಪ್ರಕೃತಿಯನ್ನು ಆಧರಿಸಿ ನಗರವನ್ನು ಕಟ್ಟಬೇಕು. ಇನ್ನು ಮುಂದೆ ನವ ಬೆಂಗಳೂರಿನಿಂದ ನವ ಕರ್ನಾಟಕ- ನವ ಕರ್ನಾಟಕದಿಂದ ನವ ಭಾರತ ಎಂಬ ಘೋಷಣೆ ನಮ್ಮದು ಎಂದರು.