ಬೆಂಗಳೂರು:
ನಗರದ ಕೇಂದ್ರ ವಿಭಾಗದ ಪೊಲೀಸರು ಶನಿವಾರ ತಡರಾತ್ರಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯ ಪಬ್‌ಗಳ ಮೇಲೆ ದಾಳಿ ನಡೆಸಿದ್ದು, ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಇಬ್ಬರು ಎಸಿಪಿ, ಆರು ಮಂದಿ ಇನ್‌ಸ್ಪೆಕ್ಟರ್, 10 ಮಂದಿ ಪಿಎಸ್ಐ, 20 ಮಹಿಳಾ ಸಿಬ್ಬಂದಿ, 20 ಕಾನ್‌ಸ್ಟೆಬಲ್‌ಗಳು ಕಾರ್ಯಾಚರಣೆ ನಡೆಸಲಾಗಿದೆ.
ವೇಶ್ಯಾವಾಟಿಕೆ, ಡ್ರಗ್ಸ್ ಸೇರಿದಂತೆ ಇತರ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಶಂಕೆಯಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಮಹಿಳೆಯರು ಪುರುಷರು ಸೇರಿ ಒಟ್ಟು 25 ಕ್ಕೂ ಹೆಚ್ವು ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದ್ದು ಅವರನ್ನು ನಾರ್ಕೋಟಿಕ್ಸ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಪೊಲೀಸರ ದಾಳಿ ವೇಳೆ ಎಂಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ಹೈಡ್ರಾಮ ನಡೆದಿದ್ದು ಪೊಲೀಸರು ವಶಕ್ಕೆ ಪಡೆಯಲು ಬರುತ್ತಿದ್ದಂತೆಯೇ ಆಫ್ರಿಕನ್ ಮಹಿಳೆಯರು ದಿಕ್ಕಾಪಾಲಾಗಿದ್ದಾರೆ. ಈ ಸಂದರ್ಭ ಓರ್ವ ಆಫ್ರಿಕನ್ ಪ್ರಜೆ ಪೊಲೀಸರ ಕೈ ತಪ್ಪಿಸಿ ಓಡೋಡಿ ಹೋಗಿದ್ದಾನೆ ಎನ್ನಲಾಗಿದೆ.
ಆದರೆ ಅಷ್ಟಕ್ಕೇ ಬಿಡದ ಬೆಂಗಳೂರು ಕೇಂದ್ರ ಪೊಲೀಸರು ಅವರನ್ನು ಅಟ್ಟಾಡಿಸಿ ಹಿಡಿದಿದ್ದಾರೆ. ಪೊಲೀಸರ ದಾಳಿ ವೇಳೆ ಕೆಲ ಯುವತಿಯರು ಹೈಡ್ರಾಮಾ ಮಾಡಿದ್ದು ವಾಗ್ವಾದಕ್ಕೂ ಇಳಿದಿದ್ದಾರೆ. ಇವರು ನಶೆಯಲ್ಲಿ ಪಬ್ನಿಂದ ಹೊರ ಬರುತ್ತಿದ್ದಂತೆಯೇ ಖಾಕಿ ಜತೆಗೆ ಕಿರಿಕ್ ಮಾಡಿದ್ದರು.
ವಿದೇಶಿಗರು ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದ್ದು ಹಲವು ವಿದೇಶಿಗರ ರಿಪೋರ್ಟ್ ಪಾಸಿಟಿವ್ ಬಂದಿದೆ. ತಡರಾತ್ರಿ ವಶಕ್ಕೆ ಪಡೆದ 26 ವಿದೇಶಿಗರಿರಲ್ಲಿ ಬಹುತೇಕರು ಡ್ರಗ್ಸ್ ನಶೆಯಲ್ಲೇ ಇದ್ದರು ಎನ್ನಲಾಗಿದೆ.
ರಾತ್ರೋ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದವರನ್ನು ತಡರಾತ್ರಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಈ ಸಂದರ್ಭ ಅನೇಕರ ಫಲಿತಾಂಶ ಪಾಸಿಟಿವ್ ಬಂದಿದ್ದು ಡ್ರಗ್ಸ್ ಸೇವನೆ ಮಾಡಿದವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.