ಬೆಳಗಾವಿ, ಡಿ.10: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇರವಾಗಿ ನೇಮಕಗೊಂಡು ತರಬೇತಿ ಯಶಸ್ವಿಯಾಗಿ ಪೂರೈಸಿದ 21 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ACF) ಇಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ನಿಷ್ಠೆ ಮತ್ತು ದಕ್ಷತೆಯ ಪ್ರಮಾಣವಚನ ಬೋಧಿಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಖಂಡ್ರೆ, “ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ಅವಕಾಶ ಪ್ರತಿಯೊಬ್ಬ ಪದವೀಧರನಿಗೂ ಸಿಗುವುದಿಲ್ಲ. ನೀವೆಲ್ಲರೂ ಪ್ರತಿಭಾವಂತರು ಮತ್ತು ಅದೃಷ್ಟವಂತರಾಗಿದ್ದೀರಿ. ಯಾವುದೇ ಆಮಿಷಕ್ಕೆ ಒಳಗಾಗದೆ, ಅರಣ್ಯ ಸಂಪನ್ಮೂಲ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು,” ಎಂದು ಸಲಹೆ ನೀಡಿದರು.
ವಿಶ್ವದಾದ್ಯಂತ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ದೊಡ್ಡ ಸವಾಲಾದ ಸಂದರ್ಭದಲ್ಲಿ, ಅರಣ್ಯ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದು ಅವರು ಉಲ್ಲೇಖಿಸಿದರು. ಅರಣ್ಯ ಸಂರಕ್ಷಣಾ ಕಾಯಿದೆ 1963, ಅರಣ್ಯ ಸಂರಕ್ಷಣಾ ಕಾಯಿದೆ 1980, ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಹೊಸ ಎಸಿಎಫ್ಗಳಿಗೆ ಸೂಚಿಸಿದರು. “ಯಾವುದೇ ರೀತಿಯ ಒತ್ತುವರಿ, ಅತಿಕ್ರಮಣ ಕಂಡರೆ ನಿರ್ದಾಕ್ಷಿಣ್ಯವಾಗಿ ತೆರವು ಆದೇಶಿಸಬೇಕು,” ಎಂದರು.
ಅರಣ್ಯ ಮತ್ತು ಪರಿಸರ ಇಲಾಖೆ ಪ್ರಕೃತಿ, ಜೀವ ವೈವಿಧ್ಯ, ಪಕ್ಷಿ–ಪ್ರಾಣಿ ಸಂಕುಲ ರಕ್ಷಣೆಗೆ ಅತ್ಯಂತ ಮಹತ್ವದ ಇಲಾಖೆಯಾಗಿದ್ದು, ಮಾನವ–ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ನೂತನ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಹೊಸ ಅಧಿಕಾರಿಗಳು ವೃಕ್ಷ ಸಂರಕ್ಷಣೆ, ವೃಕ್ಷ ಸಂವರ್ಧನೆ, ಪ್ರಾಮಾಣಿಕ ಸೇವೆಗಾಗಿ ಮನಸಾ–ವಾಚಾ–ಕರ್ಮಣಾ ಶ್ರದ್ಧೆಯಿಂದ ಕೆಲಸ ಮಾಡುವ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಪ್ರಧಾನ ಕಾರ್ಯದರ್ಶಿಗಳು ಮನೋಜ್ ಕುಮಾರ್, ಶ್ರೀನಿವಾಸುಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಮತ್ತಿತರರು ಹಾಜರಿದ್ದರು.
