ಬೆಂಗಳೂರು:
ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಗೆ ಸೇರಿದ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಬಳಸಿ ಸುಳ್ಳು ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ಪತ್ರ ಮುಖೇನ ನನ್ನ ಮೇಲೆ ದೂರು ನೀಡಿದ್ದರು ಎನ್ನಲಾದ ನಕಲಿ ಪತ್ರದ ಬಗ್ಗೆ ರಾಜ್ಯಪಾಲರಿಗೆ ನೈಜತೆ ಕುರಿತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಈಗಾಗಲೇ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದೆ.
ಎಂಟು ಲಕ್ಷದವರೆಗೆ ಲಂಚ ನೀಡುವಂತೆ ಸಚಿವರು ಜಂಟಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರು(ಎಡಿಎ) ಲಂಚ ಕೇಳುವ ಇಂತಹ ಸಂಪ್ರದಾಯವನ್ನು ನಿಯಂತ್ರಿಸದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಇತ್ತೀಚೆಗೆ ಗೆಹ್ಲೋಟ್‌ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಈ ಪತ್ರ ಬಂದ ನಂತರ ರಾಜ್ಯಪಾಲರ ಕಚೇರಿಯು ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರವನ್ನು ಹಸ್ತಾಂತರಿಸಿತ್ತು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ನಕಲಿ ಎಂದಿದ್ದರೂ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಚಲುವರಾಯಸ್ವಾಮಿ ಅವರು, ಇಂತಹ ಹೊಣೆಗಾರಿಕೆಯಿಲ್ಲದ ನಕಲಿ ಆರೋಪಗಳು ಮತ್ತು ನಕಲಿ ಅರ್ಜಿಗಳಿಗೆ ಬಲಿಯಾಗದಂತೆ ಪ್ರಾರ್ಥಿಸುತ್ತೇನೆ. ಮುಂದೆ ಇಂತಹ ಘಟನೆಗಳು ನಡೆದರೆ ಪ್ರಾಥಮಿಕ ತನಿಖೆಗೆ ಆದೇಶಿಸುವಂತೆ ರಾಜ್ಯಪಾಲರಿಗೆ ಸಚಿವರು ಮನವಿ ಮಾಡಿದರು. ಪ್ರಾಥಮಿಕ ತನಿಖೆಯಲ್ಲಿ ಪತ್ರ ಅಸಲಿ ಎಂದು ಕಂಡುಬಂದರೆ ತನಿಖೆಗೆ ಆದೇಶಿಸಬೇಕು ಎಂದರು.
“ಇದು ನಿಜವೆಂದು ಕಂಡುಬಂದರೆ ಮತ್ತು ಪುರಾವೆಗಳ ಬೆಂಬಲದೊಂದಿಗೆ ಆ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಸಾಂವಿಧಾನಿಕ ಸಂಸ್ಥೆಗಳನ್ನು ಸಮಾಜವಿರೋಧಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಸುಲಭವಾಗಿ ಸರ್ಕಾರ, ಇಲಾಖೆ ಮತ್ತು ನನಗೆ ಕೆಟ್ಟ ಹೆಸರು ತರಲು ದುರುಪಯೋಗಪಡಿಸಿಕೊಳ್ಳಬಹುದು ಎಂದು ಚಲುವರಾಯಸ್ವಾಮಿ ಹೇಳಿದರು.
ಪತ್ರವು ‘ಸಂಪೂರ್ಣವಾಗಿ ನಕಲಿ’ ಎಂದು ಪ್ರತಿಪಾದಿಸಿದ ಸಚಿವರು, ಅದರ ಬಗ್ಗೆ ತಿಳಿದ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದರು. ಸಹಾಯಕ ನಿರ್ದೇಶಕರು ಇಂತಹ ಪತ್ರ ಬರೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು. ಅವರ ಪ್ರಕಾರ, ಪತ್ರ ಬರೆದಿದ್ದಾರೆ ಎನ್ನಲಾದ ಏಳು ಮಂದಿ ಸಹಾಯಕ ನಿರ್ದೇಶಕರ ಪೈಕಿ ರಮೇಶ್ ಅವರು ಮಂಡ್ಯದಲ್ಲಿ ಕೆಲಸ ಮಾಡುತ್ತಿಲ್ಲ. ಇನ್ನುಳಿದ ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದಿದ್ದಾರೆ.