Home ಕರ್ನಾಟಕ ವಸತಿ ಯೋಜನೆಗಳ ಅನುಷ್ಠಾನ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಚಿವ ಝಮೀರ್ ಅಹ್ಮದ್ ಖಾನ್...

ವಸತಿ ಯೋಜನೆಗಳ ಅನುಷ್ಠಾನ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಚಿವ ಝಮೀರ್ ಅಹ್ಮದ್ ಖಾನ್ ಸಭೆ

30
0

ಬೆಂಗಳೂರು : ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಮನೆ ಹಂಚಿಕೆ ಯೋಜನೆಗಳ ಅನುಷ್ಠಾನ ಸಂಬಂಧ ಸಚಿವ ಝಮೀರ್ ಅಹ್ಮದ್ ಖಾನ್, ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಮಂಗಳವಾರ ವಿಧಾನಸೌಧದಲ್ಲಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ರಾಜೀವ್ ಗಾಂಧಿ ವಸತಿ ನಿಗಮದಿಂದ ಎಎಚ್‍ಪಿ ಯೋಜನೆಯಡಿ ಕೈಗೊಂಡಿರುವ 47,887 ಮನೆ ನಿರ್ಮಾಣ ಕ್ಕೆ ಫಲಾನುಭವಿಗಳ ವಂತಿಗೆ ಹಾಗೂ ಮೂಲ ಸೌಕರ್ಯ ಮೊತ್ತ 2213 ಕೋಟಿ ರೂ. ಸರಕಾರವೇ ಭರಿಸುವ ಸಂಬಂಧ ತಾತ್ವಿಕ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಸಂಪುಟದ ಮುಂದೆ ತರಲು ನಿರ್ಧರಿಸಲಾಯಿತು.

ಅದೇ ರೀತಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎಎಚ್‍ಪಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡುತ್ತಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ ಮುಂದಿನ ತಿಂಗಳು 32,946 ಮನೆ ಹಂಚಿಕೆ ಮಾಡಲು ತೀರ್ಮಾನಿಸಿದ್ದು ಅದಕ್ಕೆ ಫಲಾನುಭವಿಗಳ ವಂತಿಗೆ ಹಾಗೂ ಮೂಲ ಸೌಕರ್ಯ ಮೊತ್ತ ಸೇರಿ 862 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಲು ಕೋರಲಾಯಿತು.

ಮೊದಲ ಹಂತದಲ್ಲಿ ಹಂಚಿಕೆ ಮಾಡಿರುವ 36,784 ಮನೆಗಳಿಗೆ ಸಂಬಂಧಿಸಿದಂತೆ 500 ಕೋಟಿ ರೂ. ಬಾಕಿ ಬಿಡುಗಡೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು. ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಆಯುಕ್ತೆ ಕವಿತಾ ಮನ್ನಿಕೇರಿ, ಮುಖ್ಯ ಇಂಜಿನಿಯರ್ ರವಿಕುಮಾರ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ ಜಿಲಾನಿ ಮೊಕಾಶಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್, ಮುಖ್ಯ ಇಂಜಿನಿಯರ್ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here