Home ಬೆಂಗಳೂರು ನಗರ 1600 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆಗಳ ಆಧುನೀಕರಣ: ಮುಖ್ಯಮಂತ್ರಿ ಬಸವರಾಜ...

1600 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆಗಳ ಆಧುನೀಕರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

56
0
Modernization of Bangalore's Storm water Drains at a cost of Rs 1600 crore Bommai

ಬೆಂಗಳೂರು:

ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆ ಗಳನ್ನು (Strom water drain) 1600 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರಿನ ವಿವಿದೆಡೆ ಮಳೆಯಿಂದ ಹಾನಿಗೊಳದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ಬಾರಿ ಮಳೆಯಾದಾಗ ಎಲ್ಲಾ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಮಾಡಿದ್ದೆವು. ಈ ಪೈಕಿ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡುವುದು ಎಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿ ಬಜೆಟ್‍ನಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಡಿಪಿಆರ್ ಪೂರ್ಣಗೊಂಡ ಕೂಡಲೆ ಅನುಮೋದನೆ ನೀಡಿ ಕೆಲಸ ಪ್ರಾರಂಭಿಸಲಾಗುವುದು ಎಂದರು.

Also Read: Bengaluru’s major drains to get Rs1,600-cr upgrade

400 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಡಚಣೆಗಳಿರುವಲ್ಲಿ, ಹೂಳು ತುಂಬಿರುವಲ್ಲಿ, ಹಳೆ ಚರಂಡಿಗಳ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಲಾಗಿದೆ. ತುರ್ತಾಗಿ ಹೂಳೆತ್ತುವ ಕೆಲಸ ಆಗಬೇಕಿದೆ. ಮುಖ್ಯ ಚರಂಡಿಯ ಹೂಳೆತ್ತುವ ಕಾರ್ಯವನ್ನು ಸಮಗ್ರವಾಗಿ ಮಾಡಬೇಕು. ಹೆಚ್.ಬಿ.ಆರ್ ಬಡಾವಣೆಯ ಚರಂಡಿಯ ಸುಮಾರು 2.50 ಕಿಮಿ ಹೂಳೆತ್ತಲು ಸೂಚಿಸಲಾಗಿದೆ. ಚರಂಡಿ ಪಕ್ಕದಲ್ಲಿರುವ ವಾರ್ಡ್‍ಗಳಲ್ಲಿ ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನೂ ಕೂಡ ಹೂಳೆತ್ತಲು ಆದೇಶ ನೀಡಲಾಗಿದೆ. ಮುಖ್ಯ ಚರಂಡಿಗೆ ಸರ್ಕಾರ ಅನುದಾನವನ್ನು ಒದಗಿಸುತ್ತದೆ. ದ್ವಿತೀಯ ಮತ್ತು ತೃತೀಯ ಚರಂಡಿಗಳನ್ನು ಬಿಬಿಎಂಪಿ ಅನುದಾನದಲ್ಲಿ ಸ್ವಚ್ಛ ಮಾಡಲು ಸೂಚಿಸಲಾಗಿದೆ. ಎಸ್.ಟಿ.ಪಿ ಪ್ಲಾಂಟ್ ಸಾಮರ್ಥ್ಯವನ್ನು 40 ಎಂಎಲ್‍ಡಿ ಗೆ ಹೆಚ್ಚಿಸಲು ಸೂಚಿಸಲಾಗಿದೆ. ಬಿಬಿಎಂಪಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೊಡ್ಡ ಪ್ರಮಾಣದ ಮಳೆ

ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ಮಳೆ ಬಿದ್ದಿದೆ. ಕಳೆದ 40-50 ವರ್ಷಗಳಲ್ಲಿ ನಗರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಮೇ ತಿಂಗಳಲ್ಲಿ 15 ದಿನಗಳಲ್ಲಿ ಆಗುವಷ್ಟು ಮಳೆ 4-5 ಗಂಟೆಗಳಲ್ಲಿ ಆಗಿದೆ. ಎಲ್ಲಾ ತಗ್ಗು ಪ್ರದೇಶಗಳಲ್ಲಿ ಸಹಜವಾಗಿ ಮಳೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಮಳೆ ಬಿದ್ದಾಗ ಪ್ರವಾಹವು ಕಳೆದ ಮೂರು ನಾಲ್ಕು ದಶಕಗಳಿಂದ ಆಗುತ್ತಿದೆ. ಇದ್ದಕ್ಕೆ ಒಂದೆಡೆ ಹಲವಾರು ಪರಿಹಾರಗಳಾಗುತ್ತಿದ್ದರೂ, ಮತ್ತೊಂದೆಡೆ ನಗರ ಬೆಳೆಯುತ್ತಿದೆ. ಪರಿಹಾರಗಳೂ ಸಮಗ್ರವಾಗಿ ಪ್ರವಾಹದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.

ಹೂಳು ಹಾಗೂ ನಿಂತ ನೀರು ತೆಗೆಯಲು ತುರ್ತು ಕ್ರಮ

ಹೆಬ್ಬಾಳ ಎಸ್‍ಟಿಪಿಯಲ್ಲಿ 100 ಎಂಎಲ್‍ಡಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹೆಚ್ಚುವರಿ 60 ಎಂಎಲ್‍ಡಿ ಘಟಕ ಸ್ಥಾಪಿಸಲು ಅನುಮೋದಿಸಿ ಡಿಪಿಆರ್ ಅನುಮೋದನೆ ನೀಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ವಾರ್ಡ್‍ನಲ್ಲಿ ಸರಾಗವಾದ ನೀರು ಹರಿವಿಗೆ ಹೂಳು ತೆಗೆಯುವ ಕೆಲಸವಾಗಬೇಕು. ಪುಷ್ಪಾವತಿ ಕಣಿವೆಯಲ್ಲಿ ಹಳೆಯ ಸೇತುವೆಗಳಿವೆ. ಇವು ನೀರಿನ ಹರಿವಿಗೆ ಅಡಚಣೆ ಉಂಟುಮಾಡುತ್ತಿವೆ. ಇದನ್ನು ನಿವಾರಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೆ.ಆರ್ ಪುರಂ ವಾರ್ಡಿನಲ್ಲಿ ರೈಲು ಸೇತುವೆ ನಿರ್ಮಾಣದಲ್ಲಿ ಮುಂದಿನ ಭಾಗವನ್ನೂ ನಿರ್ಮಿಸಲು ಡಿಪಿಆರ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಹೂಳು ತೆಗೆಯುವ ಹಾಗೂ ನಿಂತ ನೀರನ್ನು ಪಂಪ್ ಮಾಡಿ ತೆಗೆಯುವ ಕೆಲಸಗಳು ತುರ್ತಾಗಿ ಮಾಡಲಾಗುತ್ತಿದೆ. ಇದಕ್ಕೆ ಬಿಬಿಎಂಪಿ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್, ಅಧಿಕಾರಿಗಳು ಹಗಲುರಾತ್ರಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ನೀರು ನುಗ್ಗಿರುವ ಮನೆಗಳಿಗೆ ಪರಿಹಾರ:

ಮುಖ್ಯ ಚರಂಡಿ ಇರುವ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದರೆ ಸಮಸ್ಯೆಯಾಗುತ್ತದೆ. ನೀರು ಹರಿಯಲು ಅಡಚಣೆಯಾಗುವಂತೆಯೂ ಈ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಿಸಿಕೊಂಡಿದ್ದಾರೆ.ಅಕ್ರಮ ಮನೆಗಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಲಾಗುವುದು. ಮಳೆನೀರು ನುಗ್ಗಿರುವ ಮನೆಗಳಿಗೆ 25,000 ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಮನೆಗಳನ್ನು ಗುರುತಿಸಿ ಇವತ್ತಿನಿಂದಲೇ ಡಿಬಿಟಿ ಮುಖಾಂತರ ಸಂತ್ರಸ್ತರಿಗೆ ತಲುಪಿಸಲಾಗುವುದು. ನೀರು ನುಗ್ಗಿರುವ ತಗ್ಗು ಪ್ರದೇಶದ ಜನರಿಗೆ ಒಂದು ವಾರದ ದಿನಸಿ ಹಾಗೂ ಊಟದ ವ್ಯವಸ್ಥೆ ಮಾಡಲು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದರು.

ಎಸ್‍ಟಿಪಿ ಘಟಕಗಳ ಹೆಚ್ಚಳ :

1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಆಗಬೇಕಿದ್ದು, ಸಮೀಕ್ಷೆ ಕಾರ್ಯ, ಅಂದಾಜು, ವಿನ್ಯಾಸಗಳು ,ಅಡಚಣೆಯ ಸ್ಥಳಗಳನ್ನು ಗುರುತಿಸುವ ಮೂಲ ಕೆಲಸಗಳನ್ನು ಮಾಡಲು ಡಿಪಿಆರ್ ಅನುಮೋದನೆಯಾಗಿದ್ದು ಕಾಮಗಾರಿ ಪ್ರಾರಂಭವಾಗುತ್ತದೆ. ರಾಜಕಾಲುವೆ ವ್ಯಾಪ್ತಿಯಲ್ಲಿರುವ ಮನೆಗಳನ್ನುತೆರವುಗೊಳಿಸಬೇಕಿದೆ. ಭಾರಿ ಪ್ರಮಾಣದ ಮಳೆಯಿಂದ 300 ಅಡಿಯ ರಾಜಕಾಲುವೆಯನ್ನೂ ಮೀರಿ ನೀರು ಹರಿದಿದೆ. ಈ ಕಾಲುವೆಗಳು ಹಳೆಯದಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಮಳೆನೀರು ಮತ್ತು ಚರಂಡಿ ನೀರನ್ನು ತಡೆಯಲು ಸಾಧ್ಯವಾಗುವುದಿಲ್ಲ. ರಾಜಕಾಲುವೆಗಳನ್ನು ದೊಡ್ಡದು ಮಾಡುವ ಕೆಲಸವಾಗಬೇಕು. ಎಸ್‍ಟಿಪಿ ಘಟಕಗಳನ್ನು ಹೆಚ್ಚಿಸಲಾಗುವುದು. ಮಳೆ ನೀರು ಕಾಲುವೆಗಳಿಗೆ ಎಸ್‍ಟಿಪಿ ಘಟಕಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ಸವಾಲುಗಳನ್ನು ಯೋಜನಾಬದ್ಧವಾಗಿ ಎದುರಿಸಲಾಗುತ್ತಿದೆ

ಬೆಂಗಳೂರಿನ ಬಗ್ಗೆ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಅವರ ಕಾಳಜಿಯ ಬಗ್ಗೆ ಅರಿವಿದೆ. ಅವರ ಕಾಲದಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿಯನ್ನು ಕಂಡಿತ್ತು. ಆದರೆ ಆಗಿನ ಬೆಂಗಳೂರಿಗೂ , ಈಗಿನ ಬೆಂಗಳೂರಿಗೂ ಬಹಳಷ್ಟು ವ್ಯಾತ್ಯಾಸಗಳಿವೆ. ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ. 110 ಹಳ್ಳಿಗಳು, ಪುರಸಭೆಗಳನ್ನು ಬೆಂಗಳೂರಿಗೆ ಸೇರಿಸಿಕೊಂಡು ನಗರ ಈಗ ಬಹಳ ವಿಸ್ತಾರವಾಗಿದೆ. ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳು ನಡೆಯುತ್ತಿದೆ. ಹೊಸ ಸವಾಲುಗಳನ್ನು ಯೋಜನಾಬದ್ಧವಾಗಿ ಎದುರಿಸಲಾಗುತ್ತಿದೆ ಎಂದರು.

ರಾಜಕಾಲುವೆ ಪ್ರದೇಶದಲ್ಲಿ ಮನೆಗಳ ತೆರವು ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಲಾಗುವುದು. ಬೆಂಗಳೂರು ಈಗ ಬಿಬಿಎಂಪಿ ಆಗಿದೆ. ಬೆಂಗಳೂರಿನ ಆಡಳಿತಾತ್ಮಕ ರಚನೆಯನ್ನು ವಿಕೇಂದ್ರೀಕರಣಗೊಳಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿಗಳು ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದ ಜೆ.ಸಿ.ನಗರ ವಾರ್ಡ್, ಲಗ್ಗೆರೆ, ನಂತರ ನಾಗವಾರ ಮೆಟ್ರೋ ಸ್ಟೇಶನ್, ಹೆಚ್.ಬಿ.ಆರ್ 5 ನೇ ಬ್ಲಾಕ್ ಹಾಗೂ ಹೆಬ್ಬಾಳ ಎಸ್.ಟಿ ಪಿ ಘಟಕಕ್ಕೆ ಸಿಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here