ಬೆಂಗಳೂರು: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಗ್ರಾಮ ಪಂಚಾಯತ್ಗಳ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯನ್ನು ರದ್ದುಪಡಿಸಿ, VB G RAM G (ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕಾ ಮಿಷನ್–ಗ್ರಾಮೀಣ) ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರಗಳನ್ನಾಗಲಿ, ಜನರನ್ನಾಗಲಿ ಕೇಳಿಲ್ಲ ಎಂದು ಆರೋಪಿಸಿದರು.
“ಡಿಸೆಂಬರ್ 17ರಂದು ಮಸೂದೆ ಮಂಡಿಸಿ, ಡಿಸೆಂಬರ್ 18ರಂದು ಕೇವಲ ಎಂಟು ಗಂಟೆಗಳ ಚರ್ಚೆಯಲ್ಲಿ ಸದನವನ್ನು ಬುಲ್ಡೋಜ್ ಮಾಡಿ ಕಾಯ್ದೆ ಅಂಗೀಕರಿಸಲಾಗಿದೆ. ಇದು ಸರ್ವಾಧಿಕಾರಿ ಧೋರಣೆಯ ಸ್ಪಷ್ಟ ಉದಾಹರಣೆ,” ಎಂದು ಸಿದ್ದರಾಮಯ್ಯ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಜನಪರ ಕಾಯ್ದೆಗಳು ಜಾರಿಯಾಗಿದ್ದವು. ಆದರೆ ಮೋದಿ ಸರ್ಕಾರ ಅವುಗಳನ್ನು ದುರ್ಬಲಗೊಳಿಸಿ ಅಥವಾ ರದ್ದುಪಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ 12.16 ಕೋಟಿ ನರೇಗಾ ಕಾರ್ಮಿಕರು ಇದ್ದು, ಅವರಲ್ಲಿ 6.21 ಕೋಟಿ ಮಹಿಳೆಯರು, ಶೇ.17 ಪರಿಶಿಷ್ಟ ಜಾತಿ ಹಾಗೂ ಶೇ.11 ಪರಿಶಿಷ್ಟ ಪಂಗಡದವರು ಇದ್ದಾರೆ. ಕರ್ನಾಟಕದಲ್ಲೇ 71.18 ಲಕ್ಷ ಸಕ್ರಿಯ ನರೇಗಾ ಕಾರ್ಮಿಕರಿದ್ದು, ಅವರಲ್ಲಿ 36.75 ಲಕ್ಷ ಮಹಿಳೆಯರು (ಶೇ.51.6) ಎಂದು ವಿವರಿಸಿದರು.
ಹಿಂದಿನ ಕಾಯ್ದೆಯಡಿ ವರ್ಷಕ್ಕೆ 100 ದಿನ ಕೆಲಸ ಖಾತ್ರಿ, ವಾಸಿಸುವ ಸ್ಥಳದಲ್ಲಿಯೇ ಉದ್ಯೋಗ, ಹಣದುಬ್ಬರಕ್ಕೆ ತಕ್ಕ ಕೂಲಿ ಹಾಗೂ ಪೂರ್ಣ ಕೇಂದ್ರ ಅನುದಾನ ಇತ್ತು. ಆದರೆ ಹೊಸ ಕಾಯ್ದೆಯಡಿ ಉದ್ಯೋಗವನ್ನು ಅಧಿಸೂಚಿತ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ, ಕೃಷಿ ಅವಧಿಯ 60 ದಿನ ಉದ್ಯೋಗ ನೀಡುವುದಿಲ್ಲ, ಕೂಲಿ ಪರಿಷ್ಕರಣೆ ವ್ಯವಸ್ಥೆ ತೆಗೆದುಹಾಕಲಾಗಿದೆ ಹಾಗೂ ಶೇ.40 ಹಣಕಾಸು ಹೊರೆ ರಾಜ್ಯಗಳ ಮೇಲೆ ಹಾಕಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280, ಹಾಗೂ 73ನೇ ತಿದ್ದುಪಡಿಯ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಪಂಚಾಯತ್ಗಳನ್ನು ಸ್ವಯಂ ಆಡಳಿತ ಸಂಸ್ಥೆಗಳ ಬದಲು ಕೇವಲ ಅನುಷ್ಠಾನ ಸಂಸ್ಥೆಗಳನ್ನಾಗಿ ಮಾಡಲಾಗಿದೆ ಎಂದರು.
ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಮಹಿಳೆಯರ ಉದ್ಯೋಗ ಪಾಲು ಕುಸಿತ, ದಲಿತ–ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚುವರಿ ಒತ್ತಡ, ಹಾಗೂ ಗ್ರಾಮೀಣ ಜೀವನೋಪಾಯಗಳ ಕುಸಿತವಾಗಲಿದೆ ಎಂದು ಎಚ್ಚರಿಸಿದರು. “ಗ್ರಾಮೀಣ ಜನರನ್ನು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳಾಗಿ ತಳ್ಳುವ ಸಂಚು ಇದಾಗಿದೆ,” ಎಂದು ಆರೋಪಿಸಿದರು.
ಡಿಸೆಂಬರ್ 30, 2025ರಂದು ಪ್ರಧಾನಿಯವರಿಗೆ ಪತ್ರ ಬರೆದು ಈ ಕಾಯ್ದೆಯನ್ನು ಹಿಂಪಡೆಯಲು ಮತ್ತು ಮನರೇಗಾವನ್ನು ಇನ್ನಷ್ಟು ಬಲಪಡಿಸಿ ಮರುಜಾರಿಗೊಳಿಸಲು ಆಗ್ರಹಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಅಗತ್ಯವಿದ್ದರೆ ಸಂವಿಧಾನದ ವ್ಯಾಪ್ತಿಯಲ್ಲಿಯೇ ತೀವ್ರ ಹೋರಾಟಕ್ಕೆ ಸರ್ಕಾರ ಸಿದ್ಧ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಚಲುವರಾಯ ಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.
