ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಂಸದ ತೇಜಸ್ವೀ ಸೂರ್ಯ
ನವದೆಹಲಿ/ಬೆಂಗಳೂರು:
ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಠೇವಣಿದಾರರಿಗೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, 5 ಲಕ್ಷ ರೂ, ವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳ ನೆರವಿಗೆ ತ್ವರಿತವಾಗಿ ಸ್ಪಂದಿಸಿದ್ದು ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ತಿಳಿಸಿದರು.
ಸೋಮವಾರ ಒಂದೇ ದಿನದಲ್ಲಿ, 12,014 ಠೇವಣಿದಾರರಿಗೆ, ಠೇವಣಿ ಖಾತರಿ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ -2021 ರ ಅನ್ವಯ 401 ಕೋಟಿ ರೂ, ಗಳಷ್ಟು ಮೊತ್ತ ಠೇವಣಿದಾರರ ಖಾತೆಗಳಿಗೆ ಠೇವಣಿ ವಿಮಾ ಮೊತ್ತ ಸಂದಾಯವಾಗಿದೆ. ಉಳಿದ ಠೇವಣಿದಾರರಿಗೆ ಈ ವಾರದಲ್ಲಿ ಮೊತ್ತ ಸಂದಾಯವಾಗಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, ” ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನ ಠೇವಣಿದಾರರ ಸಂಕಷ್ಟಕ್ಕೆ ಆರಂಭದಿಂದಲೇ ತುರ್ತಾಗಿ ಸ್ಪಂದಿಸಿದ ಶ್ರೀ ನರೇಂದ್ರ ಮೋದಿ ಸರ್ಕಾರ ಹಾಗೂ ಕೇಂದ್ರದ ಹಣಕಾಸು ಸಚಿವರು, ಬಡ,ಮಧ್ಯಮ ವರ್ಗದ ಠೇವಣಿದಾರರ ಹಿತಾಸಕ್ತಿ ಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಂಡು, ಕೋ ಆಪರೇಟಿವ್ ಬ್ಯಾಂಕ್ ಗಳನ್ನು ಇನ್ನಷ್ಟು ಪಾರದರ್ಶಕತೆ ಹಾಗೂ ವೃತ್ತಿಪರತೆ ತರುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಶ್ರಮಿಸಿದ್ದು ಗಮನಾರ್ಹ.
2020 ರಲ್ಲಿ ಠೇವಣಿದಾರರ ವಿಮೆ ಮೊತ್ತವನ್ನು 1 ಲಕ್ಷ ರೂ, ಗಳಿಂದ 5 ಲಕ್ಷಕ್ಕೆ ಏರಿಸಿ, ಅದೇ ವರ್ಷದಲ್ಲಿ (ಸೆಪ್ಟೆಂಬರ್ 17,2020) 1949 ರ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ ಗೆ ತಿದ್ದುಪಡಿ ತಂದು, ಎಲ್ಲ ಕೋ ಆಪರೇಟಿವ್ ಬ್ಯಾಂಕ್ ಗಳನ್ನು ರಿಸರ್ವ್ ಬ್ಯಾಂಕ್ ನ ನಿಬಂಧನೆಗಳು ಹಾಗೂ ನಿಯಮಾವಳಿಗಳ ಅಡಿಗೆ ತಂದಿದ್ದು ಕೇಂದ್ರ ಸರ್ಕಾರದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ನೆರವಿಗೆ ನಿಂತಿದ್ದು ಗಣನೀಯ ಸಾಧನೆ .
ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸರಕಾರವು, 1961 ರ ಠೇವಣಿ ಖಾತರಿ ಮತ್ತು ಸಾಲ ಖಾತರಿ ನಿಗಮ ಮಸೂದೆಗೆ ತಿದ್ದುಪಡಿ ತಂದು, ಬ್ಯಾಂಕ್ ಗಳು ದಿವಾಳಿ ಹೊಂದಿದ 90 ದಿನಗಳ ಒಳಗಾಗಿ, ಠೇವಣಿದಾರರಿಗೆ 5 ಲಕ್ಷ ರೂ, ಗಳ ಠೇವಣಿ ವಿಮಾ ಮೊತ್ತ ಸಂದಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಶೇ 98.3 ರಷ್ಟು ಠೇವಣಿದಾರರಿಗೆ ಅನುಕೂಲವಾಗಲಿದ್ದು, ಶೇ 50.9 ರಷ್ಟು ಠೇವಣಿ ಮೊತ್ತಕ್ಕೆ ಸುರಕ್ಷತೆ ದೊರಕಲಿದೆ ” ಎಂದು ಸಂಸದ ತೇಜಸ್ವೀ ಸೂರ್ಯ ಇದೇ ಸಂದರ್ಭದಲ್ಲಿ ವಿವರಿಸಿದರು.
ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿನ ಹಲವು ಅಕ್ರಮಗಳನ್ನು ಗಮನಿಸಿ ಆರ್ ಬಿ ಐ, ಜನವರಿ 10 2020 ರಂದು ನಿಬಂಧನಗಳಿಗೆ ಒಳಪಡಿಸಿ ನಿರ್ಬಂಧಗಳನ್ನು ಹೇರಿತ್ತು. ಈ ಬ್ಯಾಂಕ್ ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390 ರಷ್ಟು ಜನರು ರೂ,5 ಲಕ್ಷ ವರೆಗೆ ಠೇವಣಿ ಮಾಡಿರುತ್ತಾರೆ.
ಬ್ಯಾಂಕ್ ನ ಒಟ್ಟು ಠೇವಣಿ 2403.21 ಕೋಟಿ ರೂ, ಗಳಷ್ಟು ಇದ್ದರೆ, ನೀಡಿರುವ ಸಾಲದ ಮೊತ್ತವು 1438,00 ಕೋಟಿ ರೂ, ಗಳಷ್ಟಿದೆ.ನಿವ್ವಳ ಕಾರ್ಯನಿರ್ವಹಿಸದ ಸ್ವತ್ತು (NPA) ಗಳ ಮೊತ್ತವು, 31ನೇ ಮಾರ್ಚ್ 2020 ರ ವರೆಗೆ 1438.00 ಕೋಟಿ ರೂ, ಗಳಷ್ಟು ಇದ್ದು, ಕೇವಲ 27 ಸಾಲಗಾರರಿಂದ 927 ಕೋಟಿ ರೂ, ಗಳಷ್ಟು ಮೊತ್ತ ಹಂಚಿಕೆಯಿಂದ ಬ್ಯಾಂಕ್ ಗೆ ಶೇ.70 ರಷ್ಟು ಕಾರ್ಯನಿರ್ವಹಿಸದ ಸ್ವತ್ತು ಆಗಿ ಪರಿವರ್ತನೆಯಾಗಿದ್ದು ದುರಂತ.
ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ದಿವಾಳಿಯಾಗಿರುವ ಕೋ ಆಪರೇಟಿವ್ ಬ್ಯಾಂಕ್ ಗಳಿಂದ ತ್ವರಿತಗತಿಯಲ್ಲಿ ಠೇವಣಿದಾರರು, ಠೇವಣಿ ವಿಮೆಯನ್ನು ಪಡೆದಿದ್ದು ಗಮನಾರ್ಹ. ದೇಶದ ಇಂತಹ 16 ಬ್ಯಾಂಕ್ ಗಳ ದೊಡ್ಡ ಹಂತದ ಠೇವಣಿ ವಿಮೆಯ ಮರುಪಾವತಿ ಕಾರ್ಯ ಸೋಮವಾರ ಆರಂಭವಾಗಿದ್ದು, ಉಳಿದ ಠೇವಣಿದಾರರ ವಿಮೆ ಮೊತ್ತವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲಾಗುತ್ತಿದೆ. 2ನೇ ಹಂತದ ದಾಖಲಾತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 ಆಗಿದ್ದು, ಮರುಪಾವತಿಯನ್ನು ಡಿಸೆಂಬರ್ 31,2021 ರಂದು ಮಾಡಲಾಗುವುದು” ಎಂದು ಸಂಸದರು ತಿಳಿಸಿದರು.