Home ಬೆಂಗಳೂರು ನಗರ ಜಾಗೃತಿ ಮಾಹಿತಿಯನ್ನು ತಲುಪಿಸಲು ಮಾತೃಭಾಷೆ ಹೆಚ್ಚು ಪರಿಣಾಮಕಾರಿ: ಶಿವರಾಮೇಗೌಡ

ಜಾಗೃತಿ ಮಾಹಿತಿಯನ್ನು ತಲುಪಿಸಲು ಮಾತೃಭಾಷೆ ಹೆಚ್ಚು ಪರಿಣಾಮಕಾರಿ: ಶಿವರಾಮೇಗೌಡ

26
0

ಬೆಂಗಳೂರು:

ಸರ್ಕಾರದ ವಿವಿಧ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಕೋವಿಡ್ ನಂತಹ ಆರೋಗ್ಯ ಸಂಬಂಧಿತ ಜಾಗೃತಿ ಸಂದೇಶಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಯಪಡಿಸಲು ಮಾತೃಭಾಷೆ ಬಳಕೆ ಅತ್ಯಂತ ಪರಿಣಾಮಕಾರಿ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶಿವರಾಮೇಗೌಡ ಅವರು ಅಭಿಪ್ರಾಯ ಪಟ್ಟರು.

ಮೂರು ದಿನಗಳ ಬೆಂಗಳೂರು ವಿಭಾಗ ಮಟ್ಟದ ಜಾನಪದ ಕಲಾವಿದರ ತರಬೇತಿ ಕಾರ್ಯಗಾರವನ್ನು ತಮಟೆ ಭಾರಿಸುವುದರ ಮೂಲಕ ಉಧ್ಘಾಟಿಸಿ, ಮಾತಾನಾಡಿದ ಅವರು ಜಾನಪದ ಕಲೆಗಳ ಮೂಲಕ ಮಾತೃಭಾಷೆಯಲ್ಲಿ ನೀಡುವ ಮಾಹಿತಿಯು ನಮ್ಮ ನಾಡಿನ ಗ್ರಾಮೀಣ ಭಾಗದ ಜನರ ಮನಸ್ಸಿನಲ್ಲಿ ನೆಲೆಯೂರುತ್ತದೆ. ಸರ್ಕಾರಿ ಯೋಜನೆಗಳ ಮಾಹಿತಿ ನೀಡಲು ಆಯಾ ಪ್ರಾಂತ್ಯದ ಜಾನಪದ ಕಲಾ ಪ್ರಕಾರಗಳನ್ನು ಬಳಸಿಕೊಂಡಾಗ ಜನರನ್ನು ಬಹುಬೇಗ ತಲುಪಲು ಸಾಧ್ಯ ಎಂದರು.

ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆವರಣದ ಎನ್ ಎಸ್ ಎಸ್ ಭವನದಲ್ಲಿ ಆರೋಗ್ಯ ಇಲಾಖೆಯು ಹಮ್ಮಿಕೊಂಡಿದ್ದ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಭಾಗೀಯ ಸಹ ನಿರ್ದೇಶಕರಾದ ಡಾ. ರಾಮಚಂದ್ರ ಬಿ ಎಸ್ ಅವರು ಮಾತಾನಾಡಿ, ಕಳೆದ ಹಲಾವಾರು ವರ್ಷಗಳಿಂದ ಈ ಜಾನಪದ ಮಾಧ್ಯಮ ಜನರಿಗೆ ಮಾಹಿತಿಯನ್ನು ಮತ್ತು ಮನರಂಜನೆಯನ್ನು ನೀಡುವ ಕಾರ್ಯ ಮಾಡುತ್ತಿದೆ. ಟಿ.ವಿ. ಮತ್ತು ಇತರೆ ಮಾಧ್ಯಮಗಳು ಹೆಚ್ಚು ಬಳಕೆಯಾಗುತ್ತಿರುವ ಈಗಿನ ಕಾಲದಲ್ಲಿಯೂ ಜಾನಪದ ಮಾಧ್ಯಮಗಳೇ ಹೆಚ್ಚು ಮಾಹಿತಿಯನ್ನು ನೀಡುತ್ತದೆ. ಹೊಸ ಹೊಸ ಯೋಜನೆಗಳನ್ನು ಸರ್ಕಾರವು ಜಾರಿ ಮಾಡುತ್ತಿದ್ದು, ಅವುಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಈ ಜಾನಪದ ಮಾಧ್ಯಮಗಳು ಮಾಡಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತಾನಾಡಿದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು, ಸರ್ಕಾರ ಜಾರಿಗೊಳಿಸುವ ಯೋಜನೆಗಳ ಮಾಹಿತಿಯು ಕೇವಲ ಅಧಕಾರಿಗಳ ಮೂಲಕ ಜನರನ್ನು ತಲುಪುವುದಿಲ್ಲ. ಮುಖ್ಯವಾಗಿ ಗ್ರಾಮೀಣ ಜನರನ್ನು ತಲುಪಲು ಜಾನಪದ ಕಲಾ ತಂಡಗಳ ಪಾತ್ರ ಹೆಚ್ಚಾಗಿದೆ ಎಂದರು.

ಕೇವಲ ಜನಪ್ರಿಯ ಸಮೂಹ ಮಾಧ್ಯಮಗಳಾದ ಟಿ ವಿ, ಪತ್ರಿಕೆ ಅಥವಾ ಸಾಮಾಜಿಕ ಜಾಲ ತಾಣಗಳ ಮೂಲಕ ಮಾತ್ರವಲ್ಲ, ಅಧಿಕಾರಿಗಳು ಮತ್ತು ಜಾನಪದ ಕಲಾವಿದರು ಒಂದಾಗಿ ಈ ಕಾರ್ಯ ಸಾಧನೆಗೆ ಶ್ರಮಿಸಿದಾಗ ಮಾತ್ರ ಯೋಜನೆಗಳ ಜಾಗೃತಿ ಉದ್ದೇಶ ಬುಡಮಟ್ಟದಲ್ಲಿ ಸಾಕಾರಗೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಜಾನಪದ ಕಲಾವಿದರು ಮಾಹಿತಿಯೊಂದಿಗೆ ಮನರಂಜನೆ ನೀಡುತ್ತಾರೆ. ಅವರು ಬಳಸುವ ಸ್ಥಳೀಯ ಭಾಷೆಯಿಂದಾಗಿ, ಜನರು ತಮ್ಮನ್ನು ತಾವು ಕಲಾವಿದರೊಂದಿಗೆ ಹಾಗೂ ಆ ಪಾತ್ರಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಹಾಗಾಗಿ, ಸಾಮಾಜಿಕ ಜಾಲತಾಣಗಳನ್ನು ಯಥೇಚ್ಚವಾಗಿ ಬಳಸಿಕೊಳ್ಳುತ್ತಿರುವ ಇತ್ತೀಚಿನ ದಿನಗಳಲ್ಲಿಯೂ ಈ ಜಾನಪದ ಮಾಧ್ಯಮ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿಯೂ ಈ ಕಲೆಯ ಮಹತ್ವ ಹೀಗೆಯೇ ಮುಂದುವರೆಯುತ್ತದೆ ಎಂದರು.

ಕಾರ್ಯಾಗಾರದಲ್ಲಿ ಬೆಂಗಳೂರು ನಗರ ಜಿಲ್ಲೆಯ ಆರೋಗ್ಯಾಧಿಕಾರಿಗಳಾದ ಡಾ. ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಕೆ.ಆರ್. ಖಲೀಲ್ ಅಹಮದ್, ರಾಮನಗರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ.ಗಂಗಾಧರ್, ಬೆಂಗಳೂರು ನಗರ ಜಿಲ್ಲೆಯ ಕುಟುಂಬ ಕಲ್ಯಾಣಾಧಿಕಾರಿಗಳಾದ ಚೆನ್ನಕೃಷ್ಣಪ್ಪ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಐ.ಇ.ಸಿ. ವಿಭಾಗದ ಅಧಿಕಾರಿಗಳಾದ ಜ್ಞಾನೇಶ್ವರ್ ಮತ್ತು ವಿಶ್ವೇಶ್ವರಯ್ಯ, ಹಾಗೂ ಬೆಂಗಳೂರು ವಿಭಾಗೀಯ ಮಟ್ಟದ ಜಿಲ್ಲೆಗಳಾದ ಬೆಂಗಳೂರು ನಗರ ಜಿಲ್ಲೆ, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕಲಾತಂಡಗಳ ಸುಮಾರು 150 ಕಲಾವಿದರು ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here