ಬೆಂಗಳೂರು: ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಪರಿಣಮಿಸಿರುವುದರಿಂದ ಸಾಮಾನ್ಯ ನಾಗರಿಕರು ಮೆಟ್ರೋ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ, ಚೆನ್ನೈ ಹಾಗೂ ಕೊಚ್ಚಿ ಮೆಟ್ರೋಗಳೊಂದಿಗೆ ಹೋಲಿಕೆ ಮಾಡಿದರೆ, ಬೆಂಗಳೂರು ಮೆಟ್ರೋದಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ವಿಧಿಸಲಾಗುವ ದರ ದ್ವಿಗುಣವಾಗಿದೆ ಎಂದು ಹೇಳಿದರು.
ಫೆಬ್ರವರಿಯಿಂದ ಮತ್ತೆ ಬಿಎಂಆರ್ಸಿಎಲ್ 5% ಮೆಟ್ರೋ ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ ಎಂದು ಹೇಳಿದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ಹಾಗೂ ಬಿಎಂಆರ್ಸಿಎಲ್ ಜನರನ್ನು ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿವೆ ಎಂದು ಆರೋಪಿಸಿದರು. ಸಾರ್ವಜನಿಕ ಸಾರಿಗೆ ಉತ್ತೇಜಿಸುವ ಬದಲು ಜನರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂದು ಅವರು ಟೀಕಿಸಿದರು.
ಅದರ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ತೀವ್ರವಾಗಿ ವಿಳಂಬವಾಗಿರುವ ಆರೆಂಜ್ ಲೈನ್ ಮೆಟ್ರೋ ಯೋಜನೆಗೂ ಬಿಎಂಆರ್ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಈ ಯೋಜನೆಯ ವಿಳಂಬದಿಂದ ಬೆಂಗಳೂರು ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಹಿಂದಿನ ದರ ನಿಗದಿ ಸಮಿತಿಯ ತೀರ್ಮಾನವೇ ತಪ್ಪಾಗಿತ್ತು ಎಂದು ಬಿಜೆಪಿ ಆರಂಭದಲ್ಲೇ ಎಚ್ಚರಿಕೆ ನೀಡಿತ್ತು. ಆದರೆ ಬಿಎಂಆರ್ಸಿಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪನ್ನು ಸರಿಪಡಿಸಬೇಕು ಎಂದು ಸಂಸದರು ಒತ್ತಾಯಿಸಿದರು.
“ಮಾನ್ಯ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ – ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರ ನಿಲ್ಲಿ. ಮೆಟ್ರೋ ದರ ನಿಗದಿ ಸಮಿತಿಯನ್ನು ಪುನರ್ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಷಯದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರುತ್ತದೆ” ಎಂದು ತೇಜಸ್ವಿ ಸೂರ್ಯ ಹೇಳಿದರು.
ಫೆಬ್ರವರಿಯಲ್ಲಿ ಮತ್ತೆ ಮೆಟ್ರೋ ದರ ಏರಿಕೆ ಮಾಡಿದರೆ, ಬಿಜೆಪಿ ವತಿಯಿಂದ ಪ್ರತಿಯೊಂದು ಮೆಟ್ರೋ ನಿಲ್ದಾಣದ ಮುಂದೆ ಭಾರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಜನವಿರೋಧಿ ಹಾಗೂ ಅವೈಜ್ಞಾನಿಕ ದರ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.
ರಾಜ್ಯ ಸರ್ಕಾರ ದರ ಏರಿಕೆ ಮಾಡಿ ಅದರ ಹೊಣೆಗಾರಿಕೆಯನ್ನು ಕೇಂದ್ರದ ಮೇಲೆ ತಳ್ಳುವ ಪ್ರಯತ್ನವನ್ನು ಬಿಡಬೇಕು. ಬೆಂಗಳೂರು ನಾಗರಿಕರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.
