ಬೆಂಗಳೂರು : ಮಹಿಳೆಯನ್ನು ಹತ್ಯೆಗೈದು ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೋಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬನಶಂಕರಿ ಮೂಲದ ನವೀನ್ ಗೌಡ(27) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಎ.19ರಂದು ಕೊಡಿಗೇಹಳ್ಳಿಯ ಗಣೇಶ ನಗರದಲ್ಲಿ ಶೋಭಾ(48) ಎಂಬವರ ಕೊಲೆ ಪ್ರಕರಣ ದಾಖಲಾಗಿತ್ತು. ಮಹಿಳೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಕಾರ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಆ ಮಹಿಳೆಯ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ತಾಯಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಮಗಳು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.
ಆರೋಪಿಯು ಮೃತ ಮಹಿಳೆಗೆ ಇನ್‍ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ಎ.19ರಂದು ರಾತ್ರಿ ಒಟ್ಟಿಗೆ ಊಟ ಮಾಡಲು ಭೇಟಿಯಾದ ಬಳಿಕ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪೋಲೀಸರ ಕೈಗೆ ಸಿಗಬಾರದು ಎಂದು ಮೊಬೈಲ್ ಫೋನ್ ಹಾಗೂ ಕಾರು ತೆಗೆದುಕೊಂಡು ಪರಾರಿಯಾಗಿದ್ದ. ಬಳಿಕ ಆರೋಪಿ ಫೋನ್ ಹಿಂದೆ ಸಿಕ್ಕ ಎಟಿಎಂ ಕಾರ್ಡ್‍ನಿಂದ ಹಣ ಡ್ರಾ ಮಾಡಿದ್ದಾನೆ. ಈ ಮಾಹಿತಿ ಬೆನ್ನತ್ತಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈತನನ್ನು ಬಿಟ್ಟು ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.