ಬೆಂಗಳೂರು:
ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ ತಮ್ಮ ಮಠದ ಅಧಿಕಾರವನ್ನು ಮರಳಿ ಪಡೆದಿದ್ದಾರೆ.
ಪೋಕ್ಸೋ ಕೇಸಲ್ಲಿ 2022, ಸೆ.1ರಂದು ಮುರುಘಾಶ್ರೀ ಬಂಧನವಾಗಿತ್ತು. ಸತತ 14 ತಿಂಗಳು ಕಾರಾಗೃಹ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು.
ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾಶ್ರೀ ಜೈಲಲ್ಲಿದ್ದ ಕಾರಣ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು.
ಹೀಗಾಗಿ ಈವರೆಗೆ ಚಿತ್ರದುರ್ಗ ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನ.16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಜಡ್ಜ್ ಗೆ ಸೂಚಿಸಿದೆ.
ಮುರುಘಾಶ್ರೀಗೆ ಮಠದ ಆಡಳಿತಾಧಿಕಾರವನ್ನು ನ್ಯಾಯಾಧೀಶರು ಮರಳಿ ಹಸ್ತಾಂತರಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಯನ್ನು ಮುರುಘಾ ಮಠ ಗುರುವಾರ ಬಿಡುಗಡೆ ಮಾಡಿದೆ. ಅಲ್ಲದೇ, ಮುರುಘಾಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸದೇ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮಠದ ಆಡಳಿತ ನಡೆಸಲಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ.