ಚಾಮರಾಜನಗರ ಡಿಸಿಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ; ಆಕ್ಸಿಜನ್ ಕಳುಹಿಸಿದ ದಾಖಲೆ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ
ಮೈಸೂರು:
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಬರುತ್ತಿರುವ ಆರೋಪಗಳನ್ನು ನೆನೆದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗದ್ಗದಿತರಾಗಿದ್ದಾರೆ.
ಈ ಮಧ್ಯೆ, ಚಾಮರಾಜನಗರ ಡಿಸಿ ಎಂ.ಆರ್.ರವಿ ವಿರುದ್ದ ವಾಗ್ದಾಳಿ ನಡೆಸಿರುವ ರೋಹಿಣಿ ಸಿಂಧೂರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಚಾಮರಾಜನಗರ ಡಿಸಿ ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಅಷ್ಟು ಕೆಲಸ ಮಾಡಿದರೂ ಈ ರೀತಿ ಹೇಳಿದರೆ ನಮಗೂ ನೋವಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಭಾವುಕರಾಗಿದ್ದಾರೆ.
ಆಕ್ಸಿಜನ್ ಸಪ್ಲೈ ವಿಚಾರದಲ್ಲಿ ಚಾಮರಾಜನಗರ ಡಿಸಿ ಸುಳ್ಳು ಆರೋಪ ಮಾಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆರೋಪ ಮಾಡಿದ್ದಾರೆ. ಮೈಸೂರು ಡಿಸಿಯಾಗಿರುವ ನಾನು ಚಾಮರಾಜನಗರಕ್ಕಾಗಲಿ ಅಥವಾ ಇನ್ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ತಡೆದಿಲ್ಲ. ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಅಲ್ಲಿನ ಸರಬರಾಜುದಾರರು ಹಾಗೂ ಜಿಲ್ಲಾಡಳಿತ ನಡುವಿನ ಸಂವಹನ ಇರುತ್ತೆ.ಈಗ ಮೈಸೂರಿಗೆ ಬಳ್ಳಾರಿಯಿಂದ ಕಡಿಮೆ ಆಕ್ಸಿಜನ್ ಸಪ್ಲೈ ಆದರೆ ನಾನು ಬಳ್ಳಾರಿ ಡಿಸಿಯನ್ನು ದೂಷಿಸಲು ಸಾಧ್ಯವಿಲ್ಲ.ತಮ್ಮ ಜಿಲ್ಲೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳೋದು ಅವರದ್ದೇ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ಅದು ಆಗದಿದ್ದರೆ ಮೇಲಧಿಕಾರಿಗಳಿಗೆ ಹೇಳಬೇಕು. ಅದರಲ್ಲಿ ವಿಫಲವಾಗಿರುವ ಚಾಮರಾಜನಗರದವರು ಈಗ ಮೈಸೂರಿನ ಮೇಲೆ ದೂಷಿಸುತ್ತಿದ್ದಾರೆ. ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರಣೆಯಲ್ಲಿ ಇದೆಲ್ಲವು ಸಾಬೀತಾಗಲಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಈ ಜೊತೆಗೆ ಮೇ 2 ಮತ್ತು 3 ರಂದು ಚಾಮರಾಜನಗರಕ್ಕೆ ಕಳುಹಿಸಿದ ಆಕ್ಸಿಜನ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಸಮಯ ಹಾಗೂ ಬಿಲ್ ಸಂಖ್ಯೆಯ ಜೊತೆಗೆ ಮಾಹಿತಿ ಬಹಿರಂಗ ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.
ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಅವರ ಕಷ್ಟ ಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಕ್ಸಿಜನ್ ಕಳುಹಿಸಿದ್ದೇವೆ. ಅದು ನಮ್ಮ ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್ ಕಳುಹಿಸಿದ್ದೇವೆ. ಎಲ್ಲಿಯೂ ಆಸ್ಪತ್ರೆಯಿಂದ ಆಕ್ಸಿಜನ್ ಕಳುಹಿಸಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಇದು ಮಾನವೀಯತೆ ಅಲ್ಲವೇ ? ಎಂದು ಚಾಮರಾಜನಗರ ಡಿಸಿ ಎಂ ಆರ್ ರವಿಗೆ ರೋಹಿಣಿ ಸಿಂಧೂರಿ ಪ್ರಶ್ನೆ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಆಗಿರುವ ಘಟನೆ ಬಗ್ಗೆ ನೋವಿದೆ. ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ನಡೆಯುತ್ತಿವೆ. ಇದ್ರಿಂದ ನನಗೆ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ ಎಂದಿದ್ದಾರೆ.
ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೇ. ಸತ್ತವರ ಮನೆಯಲ್ಲಿ ನೋವಿರುತ್ತದೆ. ಈ ವೇಳೆ ಈ ರೀತಿ ಆರೋಪ ಮಾಡಬಾರದು. ನನ್ನ ಬಗ್ಗೆ ಅವರು(ಚಾಮರಾಜನಗರ ಡಿಸಿ) ಮಾಧ್ಯಮದಲ್ಲಿ ಹೇಳಿಕೆ ನೀಡದೇ ಇದ್ದಿದ್ದರೆ ನಾನೂ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.