ಬೆಂಗಳೂರು:
ಮಲ್ಲೇಶ್ವರಂನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಮೌಲ್ಯಮಾಪನದ ಮೊದಲ ಆವರ್ತದಲ್ಲಿ `ಬಿ+’ ಸ್ಥಾನಮಾನ ಸಿಕ್ಕಿದೆ.
ಇದಕ್ಕೆ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಫೆ. 25ರಂದು ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದ್ದಾಗ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸಿ, ಕಾಲೇಜಿನ ಬಗ್ಗೆ ಮಾಹಿತಿ ನೀಡಿದ್ದರು.
ಕಾಲೇಜಿಗೆ ಪತ್ರ ಬರೆದಿರುವ ನ್ಯಾಕ್ ಸಂಸ್ಥೆಯ ಉನ್ನತಾಧಿಕಾರಿ ಡಾ.ಎಸ್.ಸಿ.ಶರ್ಮ, ಫೆ.28ರಿಂದ ಅನ್ವಯವಾಗುವಂತೆ ನೀಡಿರುವ ಈ ಸ್ಥಾನಮಾನವು ಮುಂದಿನ 5 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಕಾಲೇಜಿನಲ್ಲಿರುವ ಮೂಲಸೌಲಭ್ಯ ಮತ್ತಿತರ ಶೈಕ್ಷಣಿಕ ಅನುಕೂಲಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಸಂಸ್ಥೆಯು, ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗೆ ಕಾಲೇಜಿನಲ್ಲಿ ಕೈಗೊಳ್ಳಬೇಕಾದ ಮತ್ತಷ್ಟು ಕ್ರಮಗಳೇನು ಎನ್ನುವುದನ್ನು ಕೂಡ ಸೂಚಿಸಿ, ಸಲಹೆ ನೀಡಿದೆ.
ನ್ಯಾಕ್ ಸ್ಥಾನಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಅಶ್ವತ್ಥನಾರಾಯಣ, “ಮೊದಲೆಲ್ಲ ಸರಕಾರಿ ಕಾಲೇಜುಗಳು ದುರವಸ್ಥೆಯಲ್ಲಿದ್ದವು. ಆದರೆ, ಇವುಗಳನ್ನು ಈಗ ಡಿಜಿಟಲೀಕರಣಕ್ಕೆ ಒಳಪಡಿಸಿದ್ದು, ಜಾಗತಿಕ ಗುಣಮಟ್ಟದ ಬೋಧನೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಲ್ಲೇಶ್ವರಂ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಮತ್ತಷ್ಟು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳಿಗೆ ಬೋಧನೆಯ ಜತೆಗೆ ಆಧುನಿಕ ಕೌಶಲ್ಯ ತರಬೇತಿಯನ್ನೂ ನೀಡಲಾಗುವುದು’ ಎಂದಿದ್ದಾರೆ.