ಬೆಂಗಳೂರು:
ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ ) ರದ್ದು ಮಾಡಿ, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಶಿಕ್ಷಣ ತಜ್ಞರ ಸಮಿತಿ ಮಾಡಿ ಮುಂದಿನ ಪೀಳಿಗೆ ಮಕ್ಕಳ ಏಳಿಗೆಗಾಗಿ ಕರ್ನಾಟಕ ಶಿಕ್ಷಣ ನೀತಿ ರೂಪಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ವಾಗ್ದಾನದಂತೆ ನಾಗ್ಪುರ ಶಿಕ್ಷಣ ನೀತಿ ರದ್ದು ಮಾಡುತ್ತೇವೆ” ಎಂದು ಹೇಳಿದರು.
ವಿಧಾನಸೌಧದಲ್ಲಿ ಶಿಕ್ಷಣ ನೀತಿ ಸಭೆಯ ನಂತರ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಿವಕುಮಾರ್ ಅವರು: “ಶಿಕ್ಷಣ ತಜ್ಞರ ಸಮಿತಿ ರಚನೆ ಸಂಬಂಧ ನಮ್ಮ ಇಬ್ಬರು ಸಚಿವರು ಪ್ರಸ್ತಾವನೆ ನೀಡುತ್ತಾರೆ. ಅತಿ ಶೀಘ್ರದಲ್ಲಿ ಹೊಸ ಪೀಳಿಗೆಯ ಬೆಳವಣಿಗೆಗೆ ಅನುಗುಣವಾಗಿ ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು. ನಮ್ಮ ಪ್ರಣಾಳಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದು, ನಮ್ಮ ವಾಗ್ದಾನಗಳಿಗೆ ಬದ್ಧವಾಗಿರುತ್ತೇವೆ.”
ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಮ್ಮಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ, ಆದರೂ ಬಿಜೆಪಿ ಸರ್ಕಾರ 2021 ರಲ್ಲಿ ತರಾತುರಿಯಲ್ಲಿ ಇದನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಹಳೆ ಕಾಲದ ಶಿಕ್ಷಣ ನೀಡಲು ಬಿಜೆಪಿ ಹೊರಟಿತ್ತು.
ನಾವು ಎಲ್ಲಾ ರಂಗಗಳಲ್ಲೂ ಮುಂದಿದ್ದೇವೆ. ಹೀಗಿರುವಾಗ ಹಲವಾರು ನ್ಯೂನ್ಯತೆಗಳಿರುವ ನಾಗ್ಪುರ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ.
ಗುಜರಾತ್, ಉತ್ತರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಯಾವ ರಾಜ್ಯಗಳಲ್ಲೂ ಎನ್‌ಇಪಿ ಜಾರಿಗೆ ತಂದಿಲ್ಲ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಏಕೆ ಬೇಕು? ನಮ್ಮ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು, ಹಳೆ ಕಾಲದ ಶಿಕ್ಷಣ ನಮ್ಮ ಮಕ್ಕಳಿಗೆ ಬೇಡ.
ಯಾವುದೇ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಜಾರಿಗೆ ಬರಬೇಕು, ಆಗ ಅದರ ಸಾಧಕ- ಭಾದಕಗಳು ತಿಳಿಯುತ್ತವೆ. 2013- 18 ಸಿದ್ದರಾಮಯ್ಯ ಅವರ ಸರ್ಕಾರದ ವೇಳೆ ಜ್ಞಾನ ಆಯೋಗ ಎಂದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಅದರ ಅಂಶಗಳನ್ನು ಈಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಎನ್‌ಇಪಿಯಲ್ಲೇ ಮುಂದುವರೆಯುತ್ತೇವೆ ಎಂದು ಡೀಮ್ಡ್ ವಿಶ್ವವಿದ್ಯಾಲಯಗಳು ಹೇಳಿವೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ “ಸಮಿತಿ ರಚನೆಯ ನಂತರ ಅಲ್ಲಿರುವ ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿ, ಮುಂದುವರೆಯಲಾಗುವುದು. ಶಿಕ್ಷಣವು ರಾಜ್ಯ ಪಟ್ಟಿಯಲ್ಲಿ ಇರುವಂತ ವಿಷಯ, ಬೇರೆಯವರ ಹಸ್ತಕ್ಷೇಪ ನಮಗೆ ಬೇಡ” ಎಂದು ಉತ್ತರಿಸಿದರು.