ಬೆಂಗಳೂರು:
ಕೆಟ್ಟ ಸರಕಾರ ರಾಜ್ಯದಲ್ಲಿದೆ. ಈ ಸರಕಾರದ ವಿರುದ್ಧ ನಾಳೆ ಮತ್ತು ನಾಡಿದ್ದು ಬಿಜೆಪಿಯು ಎಲ್ಲ ಜಿಲ್ಲೆ ಮತ್ತು ಮಂಡಲಗಳಲ್ಲಿ ದೊಡ್ಡದಾದ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ನಾನು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧ್ಯಕ್ಷರು ನಾಳೆ ಜಿಲ್ಲೆಗಳಲ್ಲಿ ಮತ್ತು ಮಂಡಲ ಅಧ್ಯಕ್ಷರು ನಾಡಿದ್ದು ಮಂಡಲಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳಿಗೇ ರೇಟ್ ಫಿಕ್ಸ್ ಮಾಡಿದ ಸರಕಾರವಿದು. ಅಧಿಕಾರಿಗಳಿಂದ ಭ್ರಷ್ಟಾಚಾರ ಆರಂಭಿಸಿದ ಈ ಸರಕಾರದ ಕಾರ್ಯವು ಕಲಾವಿದರನ್ನೂ ಬಿಟ್ಟಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು. ತಮ್ಮಲ್ಲಿ ಲಂಚ ಕೇಳಿದ್ದಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ. ಹಿಂದೆ ಎಟಿಎಂ ಸರಕಾರ ಬರಲಿದೆ ಎಂದಾಗ ಸಾಕ್ಷಿ ಕೊಡಿ ಎಂದಿದ್ದರು. ಇವತ್ತು ಸಾಕ್ಷಿ, ಆಧಾರಗಳನ್ನು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್ ಇಟ್ಟಿದ್ದಾರೆ ಎಂದು ನುಡಿದರು.
ಐ.ಟಿ.ದಾಳಿ ಆದಾಗ ಗುತ್ತಿಗೆದಾರ, ಬಿಲ್ಡರ್‍ಗಳ ಮನೆಯಲ್ಲಿ 40 ಕೋಟಿ, 50 ಕೋಟಿ ಹಣ ಸಿಗುತ್ತಿದೆ. 600 ಕೋಟಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ 45 ಕೋಟಿ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಸಂಬಂಧ ಇದೆ ಎಂಬುದು ಸ್ಪಷ್ಟವಾಗಿದೆ. ಈ ಲೂಟಿ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ್ದು ಎಟಿಎಂ ಸರಕಾರ; ಲೂಟಿ ಸರಕಾರ. ಈ ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆಗೆ ಅದನ್ನು ಕಳುಹಿಸುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕವು ಎಟಿಎಂ ಆಗಿದೆ ಎಂದು ಟೀಕಿಸಿದರು. ಇವತ್ತು ಇನ್ನೊಬ್ಬರ ಮನೆಯಲ್ಲಿ ಹಣ ಸಿಕ್ಕಿದ್ದು, ಇದೆಲ್ಲವೂ ಲೂಟಿ ಹಣ ಎಂದರಲ್ಲದೆ, ದೂರು ಕೊಡುವ ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.