ಬೆಂಗಳೂರು:
ಇಲ್ಲಿನ ಕೆಂಗೇರಿ ಸಮೀಪದ ಮೈಲಸಂದ್ರ- ಶ್ರೀನಿವಾಸಪುರದಲ್ಲಿ ಬುಧವಾರ ನಿಗದಿಯಾಗಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗೆ `ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ಮಾಡಿ, ಖುಷಿ ಅನುಭವಿಸಿದರು.
ಈ ಬಗ್ಗೆ ಮಾತನಾಡಿದ ಸಚಿವರು, `ದೇಶದ ಬೇರೆ ಬೇರೆ ಭಾಗಗಳಲ್ಲಿ ನಾನು ಮೆಟ್ರೋದಲ್ಲಿ ಸಂಚರಿಸಿ, ಅನುಭವ ಪಡೆದಿದ್ದೇನೆ. ಆದರೆ, ಬೆಂಗಳೂರಿನಲ್ಲಿ ನಮ್ಮ ಮನೆಗೆ ಹತ್ತಿರದಲ್ಲಿ ಇನ್ನೂ ಮೆಟ್ರೋ ಬಂದಿಲ್ಲ. ಹೀಗಾಗಿ, ನಮ್ಮ ರಾಜಧಾನಿಯಲ್ಲಿ ಈವರೆಗೆ ಮೆಟ್ರೋದಲ್ಲಿ ಸಂಚರಿಸುವ ಅವಕಾಶ ಸಿಕ್ಕಿರಲಿಲ್ಲ. ಇವತ್ತು ವಾರದ ದಿನವಾದ್ದರಿಂದ ಸಂಚಾರ ದಟ್ಟಣೆ ಇರುತ್ತದೆ ಎನ್ನುವುದು ಗೊತ್ತಿತ್ತು. ಹೀಗಾಗಿ, ಮೊದಲೇ ನಮ್ಮ ಮೆಟ್ರೋದಲ್ಲಿ ಸಂಚರಿಸಲು ನಿರ್ಧರಿಸಿದ್ದೆ. ಇದರಂತೆ ವಿಧಾನಸೌಧದಿಂದ ಮೈಲಸಂದ್ರಕ್ಕೆ ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಗರದ ಜೀವನಾಡಿಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
Namma Metro – A Journey of Convenience and Joy
— M B Patil (@MBPatil) October 18, 2023
✅ In tech-savvy urban transport, Bangalore's metro plays a pivotal role as the city makes remarkable strides.
✅Our government is dedicated to expanding the metro network ensuring convenient and efficient transportation for our… pic.twitter.com/Ud946Qm3ci
ಪ್ರಯಾಣದುದ್ದಕ್ಕೂ ಸಹ ಪ್ರಯಾಣಿಕರ ಜೊತೆ ಮಾತನಾಡಿಕೊಂಡು, ನಮ್ಮ ಮೆಟ್ರೋದ ಬಗ್ಗೆ ಕೇಳಿಕೊಂಡು ಬಂದೆ. ಪ್ರತಿಯೊಬ್ಬರೂ ಇದರಿಂದ ಸುಗಮ ಸಂಚಾರ ಸಾಧ್ಯವಾಗಿದೆ ಎಂದು ಹೇಳಿದರು. ಸಂಚಾರ ದಟ್ಟಣೆಯ ಸಮಸ್ಯೆ ಆಧುನಿಕ ನಗರಗಳ ಭಾಗವಾಗಿ ಬಿಟ್ಟಿದೆ. ಮೆಟ್ರೋ ಸೌಲಭ್ಯವು ನಗರದ ಸಂಚಾರ ವ್ಯವಸ್ಥೆಯ ರೂಪುರೇಷೆಗಳನ್ನೇ ಆಮೂಲಾಗ್ರವಾಗಿ ಬದಲಿಸುತ್ತಿದೆ. ಇದರಿಂದ ಬೆಂಗಳೂರಿನ ಉತ್ಪಾದಕತೆ ಗಣನೀಯವಾಗಿ ಹೆಚ್ಚಲಿದೆ. ಜೊತೆಗೆ ಇದು ಶಬ್ದ, ಧೂಳು ಮತ್ತು ಇಂಗಾಲದ ಮಾಲಿನ್ಯಗಳಿಗೆ ಪರಿಹಾರವಾಗಿದೆ. ಅಲ್ಲದೆ, ಆರೋಗ್ಯದ ಸಮಸ್ಯೆಗಳಿಂದಲೂ ತಕ್ಕ ಮಟ್ಟಿಗೆ ಪಾರಾಗಬಹುದು ಎಂದು ಪಾಟೀಲ ವಿವರಿಸಿದರು.
ಕೆಂಗೇರಿಯಲ್ಲಿ ಇಳಿದ ಅವರು, ಅಲ್ಲಿಂದ ಮುಂದಕ್ಕೆ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯ ಕಾರ್ಯಕ್ರಮಕ್ಕೆ ತೆರಳಿದರು.